ಜಿಲ್ಲಾ ಆಸ್ಪತ್ರೆ, ರಾಜ್ಯ ಮಹಿಳಾ ನಿಲಯ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಉಪ ಲೋಕಾಯುಕ್ತರ ಅನಿರೀಕ್ಷಿತ ಭೇಟಿ, ಪರಿಶೀಲನೆ

ಉಡುಪಿ: ಜಿಲ್ಲಾ ಆಸ್ಪತ್ರೆ, ರಾಜ್ಯ ಮಹಿಳಾ ನಿಲಯ, ವಿದ್ಯಾರ್ಥಿ ನಿಲಯಗಳಿಗೆಉಪ ಲೋಕಾಯುಕ್ತರು ಹಾಗೂ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಕೆ.ಎನ್.ಫಣೀಂದ್ರ ಅವರು ಅನಿರೀಕ್ಷಿತ ಭೇಟಿ ನೀಡಿ, ಮೂಲ ಸೌಕರ್ಯ, ಪೌಷ್ಠಿಕ ಆಹಾರ, ಸ್ವಚ್ಛತೆ, ವೈದ್ಯಕೀಯ ಚಿಕಿತ್ಸೆ,ಮಕ್ಕಳ ಶಿಕ್ಷಣ ಸೇರಿದಂತೆ ಮತ್ತಿತರ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್ ,ಪುರುಷರ ಹಾಗೂ ಮಹಿಳಾ ವಾರ್ಡ್ ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ಘಟಕ, ಔಷಧ ವಿತರಣ ಕೇಂದ್ರ ದೂರು ಪೆಟ್ಟಿಗೆಗಳಲ್ಲಿ ನೀಡಿದ ದೂರುಗಳನ್ನು ಸಹ ಪರಿಶೀಲಿಸಿದರು. ರೋಗಿಗಳಿಂದ ಚಿಕಿತ್ಸೆ ,ಊಟದ ವ್ಯವಸ್ಥೆ, ಔಷಧಗಳ ನೀಡುವಿಕೆ ಬಗ್ಗೆ ಮಾಹಿತಿಯನ್ನು ಸಹ ಪಡೆದರು.
ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಲು, ಹೊಸದಾಗಿ ನ್ಯೂರೋಲಾಜಿ,ನೆಫ್ರೋಲಾಜಿ, ಕಾರ್ಡಿಲಾಜಿ ವಿಭಾಗಗಳನ್ನು ತೆರೆಯಲು ಪತ್ರವನ್ನು ನೀಡಿದರೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.

ಮಕ್ಕಳೊಂದಿಗೆ ಸಮಾಲೋಚಿಸಿದ ಗೌರವಾನ್ವಿತರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಾಮಾಜಿಕ ಜವಾಬ್ದಾರಿಗಳು, ಅವರ ಭವಿಷ್ಯದ ಕನಸಿನ ಕುರಿತು ಸಮಾಲೋಚಿಸಿದರು.

ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಸ್ವಚ್ಛ ವಾತಾವರಣ ನಿರ್ಮಿಸುವ ಜೊತೆಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ಗ್ರಂಥಾಲಯ, ಕಂಪ್ಯೂಟರ್ ಹಾಗೂ ಉನ್ನತ ಜ್ಞಾನಾರ್ಜನೆಗಾಗಿ ಸ್ಪರ್ಧಾತ್ಮಕ,ನಾಗರಿಕ ಸೇವಾ ಪರೀಕ್ಷೆ ಎದುರಿಸಲು ಮಾಸಿಕ ವಿಶೇಷ ಉಪನ್ಯಾಸ,ಪುಸ್ತಕ ಗಳ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ಪಡೆದು,ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಂಪ್ಯೂಟರ್ ಜ್ಞಾನದ ಬಗ್ಗೆ ಮಕ್ಕಳಿಗೆ ಅರ್ಥೈಸುವ ಉಪನ್ಯಾಸಕರನ್ನು ಕರೆಸಿ ತಿಳಿಯುವ ರೀತಿಯಲ್ಲಿ ಪಾಠ ಹೇಳಲು ಸೂಚಿಸಿದ ಅವರು, ಇಂದಿನ ಪ್ರಜೆಗಳು ನಾಳೆಯ ಜವಾಬ್ದಾರಿಯುತ ಪ್ರಜೆಗಳು ಎಂಬ ಸಂದೇಶ ಸಾರುವ ತತ್ವ ಅಳವಡಿಸಿಕೊಳ್ಳಬೇಕು. ದೇಶಕ್ಕೆ, ಸಮಾಜಕ್ಕೆ ಮುಂದೆ ಕೊಡುಗೆ ನೀಡಲು ಅವರು ತಿಳಿಹೇಳಿದರು.
ವಿದ್ಯಾರ್ಥಿನಿಲಯಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಲಗಲು ಬೆಡ್ ಹಾಗು ಕಾಟ್ ವ್ಯವಸ್ಥೆ ಮಾಡಬೇಕು, ನಗರಸಭೆ ವತಿಯಿಂದ ವಿದ್ಯಾರ್ಥಿ ನಿಲಯಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ರಾಜ್ಯ ಮಹಿಳಾ ನಿಲಯದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅವರಿಂದ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ, ವೈದ್ಯಕೀಯ ಚಿಕಿತ್ಸೆ
ಸೇರಿದಂತೆ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ ಸ್ವಯಂ ಉದ್ಯೋಗ ಕೈಗೊಳ್ಳುತ್ತಿರುವ ಊದುಬತ್ತಿ ತಯಾರಿಕರಿಗೆ ಕೆ.ಜಿ.ಗೆ 12 ರೂ ಹಾಗೂ ಹುಣಸೇಹಣ್ಣು ಬಿಡಿಸುವವರಿಗೆ ಒಂದು ಕೆ.ಜಿ.ಗೆ ಆರು ರೂ ನೀಡುತ್ತಿದ್ದು ಇದರ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ .ವಿದ್ಯಾ ಕುಮಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ ಸೈಮನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ರಾಜ್ಯ ಲೋಕಾಯುಕ್ತ ಉಪನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories