ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳು ಕೊಲೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ಫೆಬ್ರವರಿ ಮೊದಲ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಆರೋಪಿ ಪ್ರವೀಣ್ ಚೌಗಲೆ ನೇಜಾರಿನ ತೃಪ್ತಿ ಲೇಔಟ್ ನಿವಾಸಿಗಳಾದ ಹಸೀನಾ ಮತ್ತು ಅವರ ಮಕ್ಕಳಾದ ಅಯ್ನಾಝ್, ಅಫ್ನಾನ್, ಆಸೀಮ್ ರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.
ಎಫ್.ಎಸ್.ಎಲ್ ವರದಿ, ಹಲವು ಸಾಕ್ಷ್ಯಾಧಾರಗಳು ಪೊಲೀಸರ ಕೈ ಸೇರಿದ್ದು ಆರೋಪ ಪಟ್ಟಿಯಲ್ಲಿ ಸಂಪೂರ್ಣ ವಿವರವನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಕೃತ್ಯದ ನಡೆದ ದಿನದಿಂದ 90 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ. ಆ ಹಿನ್ನಲೆಯಲ್ಲಿ ಫೆ. 10 ರ ಒಳಗೆ ಸಲ್ಲಿಸುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿಯನ್ನು ನೀಡಿದ ಉಡುಪಿ ಎಸ್ಪಿ ಡಾ.ಅರುಣ್ ಕೆ ಅವರು ನೇಜಾರಿನ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಎಫ್‌ಎಸ್‌ಎಲ್ ವರದಿ ಗಳೆಲ್ಲವೂ ನಮ್ಮ ಕೈಸೇರಿದೆ. ಈ ಕುರಿತ ಚಾರ್ಜ್‌ಶೀಟ್‌ನ್ನು ಸಿದ್ಧ ಪಡಿಸುತ್ತಿದ್ದು, ಫೆ. ಮೊದಲ ವಾರದಲ್ಲಿ ಕೋರ್ಟ್‌ಗೆ ಸಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಗಳನ್ನು ಮಾಡಲಾಗುತ್ತಿದೆ ಎಂದರು.