ಉಡುಪಿ : ರಾಜ್ಯದ ಎಲ್ಲ ಇಲಾಖೆಯ ನೇಮಕಾತಿ ಯಲ್ಲೂ ಶೇ.2ರಷ್ಟು ಕ್ರೀಡಾ ಕ್ಷೇತ್ರಕ್ಕೆ ಮೀಸಲು ಇಡಲು ನಿರ್ಧರಿಸಿದ್ದೇವೆ – ಗೃಹ ಸಚಿವ ಪರಮೇಶ್ವರ್

ಉಡುಪಿ, ಜೂ.6: ರಾಜ್ಯ ಸರಕಾರ ಕ್ರೀಡೆಗೆ ಪೋತ್ಸಾಹ ಕೊಡುವ ಕೆಲಸವನ್ನು ಮಾಡುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡೆಗೆ ಶೇ.2ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದನ್ನು ಕೇವಲ ಪೊಲೀಸ್ ಇಲಾಖೆ ಮಾತ್ರ ಸೀಮಿತಗೊಳಿಸದೆ ರಾಜ್ಯದ ಎಲ್ಲ ಇಲಾಖೆಯ ನೇಮಕಾತಿ ಯಲ್ಲೂ ಶೇ.2ರಷ್ಟು ಕ್ರೀಡಾ ಕ್ಷೇತ್ರಕ್ಕೆ ಮೀಸಲು ಇಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.


ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಜಂಟಿ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಕರ್ನಾಟಕ ರಾಜ್ಯ ಹಿರಿಯರ ಮತ್ತು ಯೂತ್ ಅಥ್ಲೆಟಿಕ್ ಮೀಟ್‌ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.


ಪೊಲೀಸ್ ಇಲಾಖೆಯ ಎಲ್ಲ ನೇಮಕಾತಿಯಲ್ಲೂ ಶೇ.2ರಷ್ಟು ಮೀಸಲಾತಿ ಕಲ್ಪಿಸಿ, ಅದರ ಪ್ರಕಾರ ಇತ್ತೀಚೆಗೆ 80 ಮಂದಿ ಕ್ರೀಡಾಪಟುಗಳು ನೇಮಕ ಮಾಡಲಾಗಿದೆ. ಅದೇ ರೀತಿ 16 ಮಂದಿ ಎಸ್ಸೈಗಳಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ನಾಲ್ಕು ಮಂದಿ ಅಥ್ಲೆಟ್ಸ್ ಕೂಡ ಇದ್ದಾರೆ ಎಂದರು.

ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಚಿಂತನೆ ಮಾಡಲಾಗುತ್ತಿದೆ. ಶಾಲಾ ಕಾಲೇಜು ಗಳಲ್ಲಿ ಓದುವ ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಿಕ್ಷಣಕ್ಕೆ ಸಮಸ್ಯೆ ಆಗುತ್ತದೆ ಎಂಬ ಭಾವನೆ ಇದೆ. ಅದು ತಪ್ಪು ಕಲ್ಪನೆಯಾಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಇನ್ನು ಉತ್ತಮವಾಗಿ ಓದಬಹುದು. ಕ್ರೀಡೆಯಿಂದ ಮನಸ್ಸು ಪರಿಶುದ್ಧ ಆಗುತ್ತದೆ. ಇದು ಓದಿಗೆ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆನ್ನು ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಿದ್ದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಮೀಳಾ ಅಯ್ಯಪ್ಪ, ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಎ.ರಾಜವೇಲು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯ ದರ್ಶಿ ದಿನೇಶ್ ಕುಮಾರ್ ಸ್ವಾಗತಿಸಿದರು. ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 18ರ ವಯೋಮಾನದ ಒಟ್ಟು 24 ಸ್ಪರ್ಧೆಗಳು ಮತ್ತು ಹಿರಿಯರ ವಿಭಾಗದಲ್ಲಿ ಒಟ್ಟು 40 ಸ್ಪರ್ಧೆಗಳು ನಡೆಯಲಿವೆ. ಹಿರಿಯರ ಕ್ರೀಡಾಕೂಟದಲ್ಲಿ 185 ಕ್ರೀಡಾಪಟುಗಳು ಹಾಗೂ ಯುತ್ ವಿಭಾಗದಲ್ಲಿ 385 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.


‘ಎಲ್ಲ ಜಿಲ್ಲೆಗಳಲ್ಲೂ ಸಿಂಥ್ಲೆಟಿಕ್ ಟ್ರಾಕ್’
ಇಂದು ಕ್ರೀಡೆಗಳು, ಅಥ್ಲೆಟ್ಸ್ ಹಾಗೂ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಕೂಡ ಬದಲಾಗಿವೆ. ಪ್ರಸ್ತುತ ರಾಜ್ಯದ ಸುಮಾರು 13 ಜಿಲ್ಲೆಗಳಲ್ಲಿ ಸಿಂಥ್ಲೆಟಿಕ್ ಟ್ರಾಕ್ ಸೌಲಭ್ಯಗಳಿವೆ. ಇದನ್ನು ಮುಂದುವರೆಸಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಸಿಂಥ್ಲೆಟಿಕ್ ಟ್ರಾಕ್ ಮಾಡಬೇಕೆಂಬುದು ಸರಕಾರದಲ್ಲಿ ಚರ್ಚೆ ಮಾಡಲಾಗಿದೆ. ಅದನ್ನು ಹಂತಹಂತವಾಗಿ ಮಾಡಲಾ ಗುವುದು ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.


ಉಡುಪಿ ಜಿಲ್ಲೆಯ ಕ್ರೀಡಾಂಗಣದಲ್ಲಿ 10ವರ್ಷಗಳ ಹಿಂದೆ ಅಳವಡಿಸಲಾದ ಸಿಂಥ್ಲೆಟಿಕ್ ಟ್ರಾಕ್ ಹಾಳಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರೀಡಾ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದ ಅವರು, ಇಂದು ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡಾ ತಂಡಗಳು ಕಡಿಮೆ ಆಗಿವೆ. ಇಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಈ ಕುರಿತು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವ ಕಾರ್ಯ ಮಾಡುತ್ತೇನೆ ಎಂದರು

Latest Indian news

Popular Stories