ಸಂತೆಕಟ್ಟೆ: ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆಯಲ್ಲಿ ಒವರ್ ಪಾಸ್ ನಿರ್ಮಿಸುತ್ತಿದ್ದು ಈಗಾಗಲೇ ಈ ಕಾಮಗಾರಿ ಕುರಿತು ಅಪಸ್ವರ ಕೇಳಿ ಬರುತ್ತಿರುವ ಬೆನ್ನಲ್ಲೇ ತಡೆಗೋಡೆ ನಿರ್ಮಾಣದ ಸಂದರ್ಭದಲ್ಲಿ ಕುಸಿತ ಕಂಡಿದೆ.
ಸಂಸದೆ ಶೋಭಾ ಕರಂದ್ಲಾಜೆ ಒವರ್ ಪಾಸ್ ನಿರ್ಮಾಣಕ್ಕಾಗಿ ಅಗೆದಿರುವ ಹೊಂಡವನ್ನು ಮಳೆಗಾಲದಲ್ಲಿ ಅಪಾಯವುಂಟಾಗಬಹುದೆಂದು ಮುಚ್ಚಲು ಆದೇಶಿಸಿದ್ದರು. ಆದರೆ ನಂತರ ಇಕ್ಕೆಲಗಳಲ್ಲಿ ಕಾಂಕ್ರೀಟಿಕರಣದ ಕಾಮಗಾರಿ ನಡೆಸಲಾಗುತ್ತಿದ್ದು ಇದೀಗ ತಡೆಗೋಡೆ ನಿರ್ಮಾಣದ ಹಂತದಲ್ಲಿ ಬದಿಯಲ್ಲಿ ಕುಸಿತ ಕಂಡಿದೆ.
ನೂತನವಾಗಿ ನಿರ್ಮಿತವಾಗಿರುವ ಮಾಂಡವಿ ಕಾಸ ಗ್ರಾಂಡೆ ಅಪಾರ್ಟ್ಮೆಂಟ್ ಸಮೀಪವೇ ಈ ಕುಸಿತವಾಗಿದ್ದು ಇದೀಗ ಸರ್ವಿಸ್ ರೋಡ್ ನಲ್ಲೂ ವಾಹನಗಳು ಚಲಾಯಿಸುವುದು ಅಪಾಯಕಾರಿಯಾಗಿ ಗೋಚರಿಸಿದೆ.
https://fb.watch/lHkOi56R6v/?mibextid=ZbWKwL
ಈ ಮುಂಚೆ ಕೂಡ ಮಣ್ಣು ಕುಸಿದಾಗ ತಾರ್ಪಲ್ ಅಳವಡಿಸಿ ಕುಸಿಯದಂತೆ ಕ್ರಮ ವಹಿಸಲಾಗಿತ್ತು. ಇದೀಗ ಮತ್ತೆ ಕಾಮಗಾರಿ ಸಂದರ್ಭದಲ್ಲಿ ಕುಸಿದು ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಈ ಮಾರ್ಗ ಗೋಚರಿಸಿದೆ.
ಇನ್ನು ಕಾಮಗಾರಿ ನಡೆಯುತ್ತಿರುವ ಪರ್ಯಾಯ ಮಾರ್ಗ ಕೂಡ ಸರಿಯಾದ ಡಾಂಬರೀಕರಣ ಇಲ್ಲದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಉಡುಪಿ ಕಡೆ ಸಾಗುವಾಗ ಈ ಮುಂಚಿನ ಸರ್ವಿಸ್ ರೋಡ್ ಬಳಸಲಾಗುತ್ತಿದ್ದು ಡಿವೈಡರ್ ಒಡೆದು ರಸ್ತೆ ಅಗಲೀಕರಣ ಮಾಡಿದ್ದರೂ ಸೂಕ್ತ ಡಾಂಬರೀಕರಣ ಮಾಡದೆ ಅಗೆದ ರಸ್ತೆಯ ಡಾಂಬರು ತಂದು ಸಮತಟ್ಟು ಮಾಡಲಾಗಿತ್ತು. ಇದೀಗ ಮಳೆಯಲ್ಲಿ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಕೋಟ್ಯಾಂತರ ರೂಪಾಯಿ ಕಾಮಗಾರಿ ನಡೆಯುತ್ತಿದ್ದರೂ ವೈಜ್ಞಾನಿಕವಾಗಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳದ ರಾಷ್ಟ್ರೀಯ ಪ್ರಾಧಿಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.