
ಉಡುಪಿ | ಇಸ್ರೇಲ್ನಿಂದ ನಡೆಯುತ್ತಿರುವುದು ನ್ಯಾಯದ ಮೇಲೆ ಅನ್ಯಾಯದ ಆಕ್ರಮಣವಾಗಿದೆ – ಶಿವ ಸುಂದರ್
ಉಡುಪಿ, ನ.18:ಇಸ್ರೇಲ್ ಮತ್ತು ಗಾಜಾದಲ್ಲಿ ನಡೆಯುತ್ತಿರುವುದು ಯುದ್ಧವಲ್ಲ. ಕಳೆದ 20ವರ್ಷಗಳಿಂದ ಸರಿಯಾಗಿ ಆಹಾರ, ನೀರು, ಔಷಧಿ ಸಿಗದೆ ನಿತ್ರಾಣ ಗೊಂಡಿರುವ ಗಾಜಾದ 23ಲಕ್ಷ ನಾಗರಿಕರ ಮೇಲೆ ನಡೆಯುತ್ತಿರುವ ಅನ್ಯಾಯಕಾರಿ ಆಕ್ರಮಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್ ಹೇಳಿದರು.
ಇವರ ಮೇಲೆ ಗಂಟೆಗೆ 45 ಬಾಂಬ್ಗಳನ್ನು ಸುರಿಸಿ, ಗಂಟೆಗೆ 12 ಕಟ್ಟಡಗಳು ನಾಶ ಮಾಡಲಾಗುತ್ತಿದೆ. ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾಯುತ್ತಿವೆ. ಆದುದರಿಂದ ಈಗ ಅಲ್ಲಿ ನಡೆಯುತ್ತಿರುವುದು ಅಮಾನುಷ ಹಾಗೂ ಬರ್ಬರವಾದ ದಾಳಿಯಾಗಿದೆಂದು ಅವರು ತಿಳಿಸಿದರು.
ಸಹಬಾಳ್ವೆ ಉಡುಪಿ ವತಿಯಿಂದ ಉಡುಪಿ ಡಾನ್ ಬಾಸ್ಕೋ ಹಾಲ್ ನಲ್ಲಿ ಶನಿವಾರ ಎ.ಎಸ್. ಪುತ್ತಿಗೆಯವರ ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವುದೇನು? ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಇಸ್ರೇಲ್ನ ಅನ್ಯಾಯಕಾರಿ ಆಕ್ರಮಣದ ವಿರುದ್ಧ ಇಡೀ ಜಗತ್ತಿನಾದ್ಯಂತ ದಿಗ್ಭಂಧನದ ಬಹೃತ್ ಜಾಗತಿಕ ಚಳವಳಿ ನಡೆಯುತ್ತಿದೆ. ಇದುವೇ ನಮ್ಮ ಮುಂದೆ ಇರುವ ಏಕೈಕ ಆಶಾಕಿರಣ. ಇಂದು ಜಗತ್ತಿನ ಜನರ ಅಭಿಪ್ರಾಯವು ನ್ಯಾಯದ ಪರವಾಗಿ ವಾಲುತ್ತಿದೆ. ಭಾರತದಲ್ಲಿಯೂ ಜನ ನ್ಯಾಯದ ಪರ ಹೋರಾಟ ಕಟ್ಟದಿದ್ದರೆ ಬಲಪಂಥೀಯ ಗಟ್ಟಿಯಾಗಿ ಅದರ ಬಲಿಪಶುಗಳು ನಾವೆಲ್ಲ ಆಗಬೇಕಾಗುತ್ತದೆ. ನಾಗರಿಕ ಶಕ್ತಿ ಮಾತ್ರ ಈ ಜಗತ್ತನ್ನು ಉಳಿಸಲು ಸಾಧ್ಯ ಎಂದರು.
ಇಸ್ರೇಲ್ ನಡೆಸುತ್ತಿರುವ ಅನ್ಯಾಯಕಾರಿ ಆಕ್ರಮಣಕ್ಕೆ ಭಾರತದಲ್ಲಿನ ಹಿಂದುತ್ವ ಧ್ವೇಷದ ರಾಜಕಾರಣ ಇನ್ನಷ್ಟು ಹೊತ್ತಿ ಬೆಳೆಯಲು ಅವಕಾಶ ಮಾಡಿಕೊಡುತ್ತಿದೆ. ಅನ್ಯಾಯಕಾರಿ ಅಕ್ರಮಣವನ್ನು ಭಾರತದ ಅಂತಗರ್ತದಲ್ಲಿ ನಡೆಯುತ್ತಿರುವ ಅನ್ಯಾಯ, ನರಸಂಹಾರದ ರಾಜಕಾರಣಕ್ಕೆ ಪೂರಕವಾಗಿ ಮತ್ತು ಪುಷ್ಠಿ ಕೊಡಲು ಬಳಸಿಕೊಳ್ಳಲಾಗುತ್ತಿದೆ. ಆದುದರಿಂದ ಭಾರತೀಯ ಸರಿಯಾಗಿ ನ್ಯಾಯದ ಪರವಾಗಿ ನಿಲುವು ತೆಗೆದುಕೊಳ್ಳದಿದ್ದರೆ ಅನ್ಯಾಯ ಗೆಲುವು ಇಡೀ ಜಗತ್ತಿನಲ್ಲಿ ವಿಜೃಂಭಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇಸ್ರೇಲ್ನಲ್ಲಿ ನಡೆಯುತ್ತಿರುವುದು ನ್ಯಾಯದ ಮೇಲಿನ ಅನ್ಯಾಯದ ಆಕ್ರಮಣವಾಗಿದೆ. ಭಾರತದಲ್ಲಿ ನ್ಯಾಯದ ಪ್ರಜ್ಞೆ ಉದ್ದೀಪನ ಆಗದಿದ್ದರೆ ಮುಂದೆ ಅನ್ಯಾಯದ ಜಾಗತೀಕರಣಕ್ಕೆ ನಾವೆಲ್ಲ ಬಲಿಯಾಗಬೇಕಾಗುತ್ತದೆ. ಪುರಾಣಗಳನ್ನು ಚರಿತ್ರೆಯನ್ನಾಗಿ ಮಾಡಿ, ಆ ಚರಿತ್ರೆಯನ್ನು ಮೂಲಕ ವರ್ತಮಾನ ಮತ್ತು ಭವಿಷ್ಯವನ್ನು ಕಟ್ಟುವ ಭಾರತದ ರಾಜಕಾರಣವೇ ಇಸ್ರೇಲ್ನಲ್ಲಿ ನಡೆಯುತ್ತಿರು ವುದು ಎಂದು ಅವರು ಹೇಳಿದರು.
ಇಸ್ರೇಲ್ ಆಕ್ರಮಣದ ಅಂತಿಮ ಗುರಿ, ಇಡೀ ಗಾಜಾಪಟ್ಟಿಯಲ್ಲಿರುವ 23 ಲಕ್ಷ ಜನರನ್ನು ಉತ್ತರದಿಂದ ದಕ್ಷಿಣಕ್ಕೆ ತಳ್ಳಿ, ಅಲ್ಲಿಂದ ಈಜಿಪ್ಟ್ಗೆ ದೂಡಿ ಬಿಡುವುದಾಗಿದೆ. ಆಗ ಇಡೀ ಗಾಜಾ ಇವರ ವಶಕ್ಕೆ ಪಡೆದುಕೊಳ್ಳಬಹುದು. ಆದುದರಿಂದ ಇಲ್ಲಿ ನಡೆಯುತ್ತಿರುವುದು ವಿಪತ್ತೇ ಹೊರತು ಯುದ್ಧ ಅಲ್ಲ. ಅದೊಂದು ವಿಪತ್ತು. 1948ಗಿಂತ ದೊಡ್ಡ ವಿಪತ್ತು ಈಗ ನಡೆಯುತ್ತಿದೆ. ಇದನ್ನು ಜಗತ್ತು ವೌನವಾಗಿ ಸಹಿಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಇಸ್ರೇಲ್ ಯಹೂದಿಯರಿಗೆ ಬೈಬಲ್ನಲ್ಲಿ ಕೊಟ್ಟ ದೇಶ ಎಂದು ಹೇಳಲಾಗುತ್ತದೆ. ಆದರೆ ಬೈಬಲ್ ಒಂದು ಚರಿತ್ರೆಯ ಪುಸ್ತಕ ಅಲ್ಲ ಎಂಬುದು ಎಲ್ಲರು ತಿಳಿದುಕೊಳ್ಳಬೇಕಾಗಿದೆ. ಅದು ಒಂದು ವಿಶ್ವಾಸದ ಪುಸ್ತಕವಾಗಿದೆ. ಆದುದರಿಂದ ಬೈಬಲ್ ಆಧಾರದಲ್ಲಿ ಇಸ್ರೇಲ್ನ್ನು ಪರ ವಹಿಸಿಕೊಳ್ಳುವುದು ತಪ್ಪು ಎಂದು ಹೇಳಿದರು.
ವಿಮರ್ಶಕ ಮುಷ್ತಾಕ್ ಹೆನ್ನಾಬೈಲು ಪುಸ್ತಕ ಪರಿಚಯ ಮಾಡಿದರು. ಅಧ್ಯಕ್ಷತೆಯನ್ನು ಸಹಬಾಳ್ವೆ ಸಂಚಾಲಕ ಪ್ರೊ.ಕೆ.ಫಣಿರಾಜ್ ವಹಿಸಿದ್ದರು.
ಸಹಬಾಳ್ವೆ ಜಿಲ್ಲಾ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಸ್ವಾಗತ ಮತ್ತು ಪ್ರಸ್ತಾವಿಕ ಭಾಷಣ ಮಾಡಿದರು. ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಧನ್ಯವಾದವಿತ್ತರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.




