ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ ಇಂದು ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾದರು. ಶಾಸಕ ಯಶ್ ಪಾಲ್ ಸುವರ್ಣ ಸ್ವಚ್ಛತಾ ಕಾರ್ಯದಲ್ಲಿ ಅವರೊಂದಿಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಜನವರಿ 22 ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗುತ್ತಿದೆ. ಎರಡು ವರ್ಷದ ಹಿಂದೆ ಅಯೋಧ್ಯೆ ಒಂದು ಸಣ್ಣ ಹಳ್ಳಿಯಾಗಿತ್ತು. ಗಲ್ಲಿ ರಸ್ತೆ ವಿಶಾಲವಾಗಿ ಬೆಳೆದಿದೆ ಅಭಿವೃದ್ಧಿ ಆಗಿದೆ. ಏರ್ಪೋರ್ಟ್, ರೈಲ್ವೆ ನಿಲ್ದಾಣ, ವಿಶಾಲ ರಸ್ತೆ ಕಟ್ಟಡಗಳು ಆಗುತ್ತಿದೆ.ದೇಶದ ಎಲ್ಲಾ ದೇವಸ್ಥಾನಗಳು ಸ್ವಚ್ಛವಾಗಬೇಕು ಎಂಬುದು ಪ್ರಧಾನಿಗಳ ಕಲ್ಪನೆ ಎಂದರು.
ಉಡುಪಿ ಬನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ ಮಾಡಿದ್ದೇವೆ. ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದು ಬಹಳ ಖುಷಿ ತಂದಿದೆ ಎಂದು ಹೇಳಿದರು.
ರಾಮ ಮಂದಿರ ಪ್ರತಿಷ್ಠೆ- ಕಾಂಗ್ರೆಸ್ ಅಂತರದ ಕುರಿತು ಪ್ರತಿಕ್ರಿಯಿಸಿ, ” ರಾಮ ಎಲ್ಲರ ದೇವರು ಅವನಿಗೆ ಜಾತಿ ಧರ್ಮ ಇಲ್ಲ. ಇಂಡೊನೇಶಿಯಾ ಒಂದು ಮುಸಲ್ಮಾನರ ದೇಶವಾದರೂ ಮಹಾಭಾರತದಲ್ಲಿರುವ ಮಹಾಪುರುಷರ, ರಾಮನ ಹೆಸರನ್ನು ಅಲ್ಲಿಯ ಮಕ್ಕಳಿಗೆ ಇಡುತ್ತಾರೆ. ಅಲ್ಲಿ ಗೀತೋಪದೇಶ, ರಾಮಕಥೆಗಳು ನಡೆಯುತ್ತದೆ. ಮಹಾರಾಜ ಆತನ ಮಕ್ಕಳಿಗೂ ನಮ್ಮ ದೇವರುಗಳ ಹೆಸರಿಡುತ್ತಾರೆ. ಇಂಡೋನೇಷ್ಯಾ ಮಹಾರಾಜರ ಮಗ ಸುಕರ್ಣೋವಾಗಿದೆ.
ರಾಮಾಯಣ ಮಹಾಭಾರತವನ್ನು ಸ್ವೀಕಾರ ಮಾಡಿ ಮುಸಲ್ಮಾನ ದೇಶಗಳು ಅಧ್ಯಯನ ಮಾಡುತ್ತಿವೆ. ನಮ್ಮ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ. ಒಂದು ವರ್ಗದ ಮತ ಸೆಳೆಯಲು ಓಲೈಕೆಗಾಗಿ ರಾಮನ ತಿರಸ್ಕಾರ ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್ ನಾಯಕರ ಮನೆಗೆ ಹೋದರೆ ರಾಮ-ಕೃಷ್ಣ, ಶಿವನ ಪೂಜೆ ಮಾಡುತ್ತಾರೆ.ಮನೆಯಿಂದ ಆಚೆ ಬಂದರೆ ಬೇರೆ ಬೇರೆ ನಾಟಕಗಳನ್ನು ಮಾಡುತ್ತಾರೆ.ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಚುನಾವಣೆ ಬಂದರೆ ಮಂದಿರ ಸುತ್ತುತ್ತಾರೆ ಎಂದರು.
ಈಗ ಭವ್ಯ ದೇಗುಲ ಉದ್ಘಾಟನೆ ತಿರಸ್ಕಾರ ಮಾಡುತ್ತಾರೆ. ಅನೇಕ ನಾಯಕರಿಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕು ಎಂಬ ಇಚ್ಛೆ ಇದೆ. ರಾಜಕೀಯದ ಕಾರಣಕ್ಕೆ ಹಲವರು ದೂರ ಸರಿಯುತ್ತಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಕೂಡಲೇ ಎಲ್ಲರೂ ಅಯೋಧ್ಯೆಗೆ ಬರ್ತಾರೆ ಎಂದರು. ವಿರೋಧಿಸಿದ ಎಲ್ಲರೂ ರಾಮನ ದರ್ಶನ ಮಾಡುತ್ತಾರೆ ಎಂದರು.
ಸಿದ್ದ ರಾಮಯ್ಯ ಪೂರ್ಣಾವಧಿ ಸಿಎಂ ಚರ್ಚೆ ವಿಚಾರ:
ಸರಕಾರ ಆರಂಭವಾದ ಮೊದಲ ದಿನದಿಂದಲೇ ಗೊಂದಲ ಇದೆ. ಸಿಎಂ- ಡಿಸಿಎಂ ಮಂತ್ರಿ -ಶಾಸಕರ ನಡುವೆ ಗೊಂದಲವಿದೆ. ಗುಂಪುಗಳಾಗಿ ಬೇರೆ ಬೇರೆ ಕಡೆ ಸೇರಲು ರೆಸಾರ್ಟ್ ರಾಜಕೀಯ ಮಾಡಲು ವಿದೇಶಕ್ಕೆ ಹೋಗಲು ಯೋಚನೆ ಮಾಡ್ತಿವೆ ಎಂದರು.
ಅಭಿವೃದ್ಧಿ ನಿರ್ಲಕ್ಷ , ಜಾತೀಯ ಕಾರಣದಿಂದ ಹೊಡೆದಾಟಗಳು ನಡೆಯುತ್ತಿರುವುದು ಈ ಆಂತರಿಕ ಬೇಗುದಿಗೆ ಕಾರಣವಾಗಿದೆ. ಕಾಂಗ್ರೆಸ್ ನಲ್ಲಿ ಅಧಿಕಾರಕ್ಕಾಗಿ ಹೊಡೆದಾಟ ನಡೆಯುತ್ತಿದೆ. ಲೋಕಸಭೆ ಚುನಾವಣೆ ತನಕ ಕಾಂಗ್ರೆಸ್ ನ ಬಿರುಕು ದೊಡ್ಡದಾಗುತ್ತದೆ. ಅದು ಯಾವ ಹಂತಕ್ಕೆ ತಲುಪುತ್ತದೆ ಎಂದು ಕರ್ನಾಟಕ ರಾಜ್ಯದ ಜನ ಊಹೆ ಮಾಡಲು ಕಷ್ಟ.ಕಾಂಗ್ರೆಸ್ ನ ಹಲವಾರು ಗೆಳೆಯರು ಸರಕಾರ ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಕಾದು ನೋಡೋಣ ಏನೇನಾಗುತ್ತೆ ಅಂತ ಎಂದು ಉಡುಪಿಯಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದರು.