ಉಡುಪಿ: ಬ್ರಹ್ಮಾವರ ಎಸ್ ಎಂ ಎಸ್ ಶಿಕ್ಷಣ ಸಂಸ್ಥೆಯಲ್ಲಿ ದೇಶದ ಸಂವಿಧಾನಕ್ಕೆ ಬದ್ಧರಾಗಿ ರಾಜ್ಯ, ಕೇಂದ್ರ ನಿಗದಿ ಪಡಿಸಿದ ಪಠ್ಯಪುಸ್ತಕಗಳನ್ನೆ ಆಧಾರವಾಗಿಟ್ಟುಕೊಂಡು ತರಗತಿಯನ್ನು ನಡೆಸಲಾಗುತ್ತಿದೆ. ಇನ್ನಿತರ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲೆ ಅಭಿಲಾಷ ಸ್ಪಷ್ಟಪಡಿಸಿದ್ದಾರೆ.
ಎಸ್ಎಂಎಸ್ ಶಿಕ್ಷಣ ಸಂಸ್ಥೆಯ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಧರ್ಮ ಶಿಕ್ಷಣ ನೀಡಲಾಗುತ್ತಿದೆ ಎಂಬ ವದಂತಿ ಹಬ್ಬಿತ್ತು. ಈ ಕುರಿತಂತೆ ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಎಂಎಸ್ ಶಿಕ್ಷಣ ಸಂಸ್ಥೆ ನೂರಾರು ವರ್ಷಗಳಿಂದ ಬ್ರಹ್ಮಾವರದಲ್ಲಿ ಶೈಕ್ಷಣಿಕ ಸೇವೆಯನ್ನು ನೀಡುತ್ತಿದೆ. ಇಲ್ಲಿ ಅನೇಕ ಮಕ್ಕಳು ಕಲಿತು ವಿದ್ಯಾವಂತರಾಗಿ ಉತ್ತಮ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಹರಿದು ಬಿಟ್ಟಿದ್ದಾರೆ. ಈ ಸುದ್ದಿಗಳು ವಾಸ್ತವಕ್ಕೆ ದೂರವಾಗಿದ್ದು, ಇಲ್ಲಿ ಸಂತ್ಯಾಂಶವನ್ನು ತಿರುಚಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ರೀತಿಯ ವರ್ತನೆಯಿಂದ ಮಕ್ಕಳ ಮನಸ್ಸಿನ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು.ಇಂತಹ ಮನಸ್ಥಿತಿಯ ಬಗ್ಗೆ ಬೇಸರವಾಗುತ್ತದೆ ಎಂದರು.
ಎಸ್.ಎಮ್‌ಎಸ್ ಶಾಲೆಯ ಕಿರು ಪರೀಕ್ಷೆಯಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಪ್ರಶ್ನೆಗಳನ್ನು ಮಾತ್ರ ಕೆಳಲಾಗಿತ್ತು ಎಂಬ ಸುಳ್ಳು ಸುದ್ದಿಯೊಂದು ವೈರಲಾಗಿತ್ತು. ಅದಕ್ಕೆ ಇದೀಗ ಶಾಲಾ ವತಿಯಿಂದ ಸ್ಪಷ್ಟನೆ ನೀಡಲಾಗಿದೆ.