ಉಡುಪಿ: ಮಾದಕ ದ್ರವ್ಯ ಈಗ ಕೇವಲ ಸಾಮಾಜಿಕ ಪಿಡುಗು ಆಗಿರದೆ ದೇಶದ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ. ಆದುದರಿಂದ ಇದರ ವಿರುದ್ಧ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಹೇಳಿದ್ದಾರೆ.
ಉಡುಪಿ ಪತ್ರಿಕಾ ಭವನ ಸಮಿತಿಯ ವತಿಯಿಂದ ಮಂಗಳವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೀಚ್‌ಗಳಲ್ಲಿ ಗಾಂಜಾ ಸೇವನೆ, ಮಾರಾಟಕ್ಕೆ ಸಂಬಂಧಿಸಿ ಹಲವು ಪ್ರಕರಣಗಳನ್ನು ದಾಖಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ ಎಂದರು.
ಅಭಿಯಾನದ ಮೂಲಕ ಕಾರವಾರದಿಂದ ಮಂಗಳೂರುವರೆಗಿನ ಕರಾವಳಿ ತೀರದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ 500ಕ್ಕೂ ಅಧಿಕ ಕಡೆಗಳಲ್ಲಿ ಸಿಸಿಟಿವಿಯನ್ನು ಆಳವಡಿಸಲಾಗಿದೆ. ಸಾಗರ ರಕ್ಷಕ ದಳದಲ್ಲಿ 1200ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ ಕರಾವಳಿಗೆ ಸೀ ಅಂಬ್ಯುಲೆನ್ಸ್ ಸಾಕಷ್ಟು ಅವಶ್ಯಕವಾಗಿದ್ದು, ಇದನ್ನು ಒದಗಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಯಾಗಿ ಇಲಾಖೆಗೆ ಬಲ ತುಂಬಿಸುವ ಕಾರ್ಯವನ್ನು ಸರಕಾರ ಹಂತಹಂತವಾಗಿ ಮಾಡುತ್ತಿದೆ ಎಂದರು.
ಸದಾ ಕಾಲ ಸಮುದ್ರದಲ್ಲಿರುವ ಮೀನುಗಾರರಿಂದ ಎಲ್ಲ ರೀತಿಯ ಸಹಕಾರ ನಮಗೆ ಸಿಗುತ್ತಿದೆ. ಇಲ್ಲಿನ ಮೀನುಗಾರರು ಯಾವತ್ತೂ ತುಂಬಾ ಅಲರ್ಟ್ ಆಗಿರುತ್ತಾರೆ. ಯಾವುದೇ ಹೊಸ ಅಥವಾ ಅನುಮಾನಾಸ್ಪದ ಬೋಟುಗಳು ಕಂಡುಬಂದರೆ ಕೂಡಲೇ ನಮಗೆ ಮಾಹಿತಿ ನೀಡುತ್ತಾರೆ. ಮೀನುಗಾರರೇ ನಮ್ಮ ಬಹಳ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಅವರು ಹೇಳಿದರು.
ಕರ್ತವ್ಯದಲ್ಲಿ ಟೀಮ್ ವರ್ಕ್ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಸಮಾನತೆಯ ತತ್ವದ ಮೇಲೆ ನಂಬಿಕೆ ಇಟ್ಟುಕೊಳ್ಳ ಬೇಕು. ನಮ್ಮ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ಅತ್ಯುತ್ತಮ ಟೀಮ್ ವರ್ಕ್ ನಡೆಯುತ್ತದೆ. ಹಾಗಾಗಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆದಿವೆ. ಅಲ್ಲದೆ ನಿಷ್ಠೆ ಕೂಡ ಅತೀ ಅಗತ್ಯ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಸ್ವಾಗತಿಸಿ ದರು. ಸಹ ಸಂಚಾಲಕ ಅಂಕಿತ್ ಶೆಟ್ಟಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು