ಮಂಗಳೂರು/ಉಡುಪಿ: ಎಸೆಸೆಲ್ಸಿ ಪರೀಕ್ಷೆ ಮಾ.25ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿ ಗಳಿಗೆ ಯಾವುದೇ ರೀತಿಯ ಸಮಸ್ಯೆ ಗಳಾಗದಂತೆ ಎಚ್ಚರಿಕೆ ವಹಿಸಲು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.
ದ.ಕ. ಜಿಲ್ಲಾ ಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಎಸೆಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷೆಗೆ ಮಕ್ಕಳ ಓಡಾಟಕ್ಕೆ ಬಸ್ಸಿನ ತೊಂದರೆ ಆಗಬಾರದು. ಇದಕ್ಕಾಗಿ ಪ್ರತೀ ತಾಲೂಕುಗಳ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೆಎಸ್ಸಾರ್ಟಿಸಿ ಅಧಿ ಕಾರಿಗಳು ಚರ್ಚಿಸಿ ಪರೀಕ್ಷೆಗೆ ಅನುಕೂಲವಾಗುವಂತೆ ಬಸ್ಸಿನ ಸಮಯ, ಸಾಗುವ ಮಾರ್ಗದ ಬಗ್ಗೆ ಪಟ್ಟಿ ತಯಾರಿಸಿ ವಿದ್ಯಾರ್ಥಿಗಳ ಮಾಹಿತಿಗೆ ನೀಡಬೇಕು ಎಂದರು. ದ.ಕ. ಜಿಲ್ಲೆಯಲ್ಲಿ ಒಟ್ಟು 30,348 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
88 ಪರೀಕ್ಷಾ ಕೇಂದ್ರಗಳು ದ.ಕ. ಜಿಲ್ಲೆಯಲ್ಲಿ ಒಟ್ಟು 88 ಪರೀಕ್ಷಾ ಕೇಂದ್ರಗಳಿವೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ ಮಾಡಲಾಗಿದ್ದು, ಸೂಕ್ತ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿ. ಪಂ. ಸಿಇಒ ಡಾ|ಆನಂದ್, ಜಿಲ್ಲಾ ಎಸ್‌ಪಿ ರಿಷ್ಯಂತ್ ಸಿ.ಬಿ., ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ್ ಗೋಯಲ್, ಎಡಿಸಿ ಡಾ| ಸಂತೋಷ ಕುಮಾರ್, ಸಹಾಯಕ ಆಯುಕ್ತರಾದ ಹರ್ಷವರ್ಧನ್, ಜುಬಿನ್ ಮೊಹಪಾತ್ರ, ಡಿಡಿಪಿಐ ವೆಂಕಟೇಶ್ ಎಸ್. ಪಟಗಾರ್, ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ: 14,331 ಮಂದಿ ನೋಂದಣಿ
ಉಡುಪಿ: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ 51 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು ಅಗತ್ಯ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ.
13,454 ಹೊಸಬರು ಹಾಗೂ 877 ಪುನರಾವರ್ತಿತರು ಹಾಗೂ ಖಾಸಗಿ ಅಭ್ಯರ್ಥಿಗಳು ಸೇರಿದಂತೆ 14,331 ಅಭ್ಯರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.
51 ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸಲು ಜಿಲ್ಲಾ ಹಾಗೂ ಬ್ಲಾಕ್ ಹಂತದಲ್ಲಿ ಪ್ರತ್ಯೇಕ ಭದ್ರತ ತಂಡ ರಚನೆ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಕೊಂಡೊಯ್ಯುವ ವಾಹನಕ್ಕೆ ಜಿಪಿಎಸ್ ಸಹಿತ ಭದ್ರತಾ ಸಲಕರಣೆ ಅಳವಡಿಸಲಾಗುತ್ತಿದೆ. ಎಲ್ಲ ಕೇಂದ್ರಗಳಲ್ಲೂ ಸಿಟ್ಟಿಂಗ್ ಸ್ಕ್ವಾಡ್ ಇರಲಿದೆ. ಜಿಲ್ಲಾ ಮತ್ತು ತಾಲೂಕು ಹಂತದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸ್ಕ್ವಾಡ್ ರಚನೆ ಮಾಡಲಾಗಿದೆ. ಈ ಸ್ಕ್ವಾಡ್ ಪರೀಕ್ಷೆ ದಿನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಪರೀಕ್ಷೆ ಕೇಂದ್ರಕ್ಕೆ ಸಿಸಿಟಿವಿ, ಕುಡಿಯುವ ನೀರು, ಶೌಚಾಲಯ, ಕೊಠಡಿ ಇತ್ಯಾದಿಗಳನ್ನು ವ್ಯವಸ್ಥಿತರವಾಗಿ ಒದಗಿಸುವ ಕಾರ್ಯವೂ ವೇಗವಾಗಿ ನಡೆಯುತ್ತಿದೆ. ಅಣಕು ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದೆ ಎಂದು ಡಿಡಿಪಿಐ ಕೆ.ಗಣಪತಿ ಮಾಹಿತಿ ನೀಡಿದರು.