Udupi | ಅಗತ್ಯ ವಸ್ತುಗಳ ಬೆಲೆ ಏರಿಕೆ -ಭಾರತ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ

ಉಡುಪಿ, ಜೂ.28: ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರು ಸೇರಿದಂತೆ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.

ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚಳವು ಜನ ಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಆಗಲಿದೆ. ಕೇಂದ್ರ ಸರಕಾರವು ಜಿಎಸ್‌ಟಿ ಜಾರಿಗೆ ತಂದ ನಂತರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ತೀವ್ರ ಹೆಚ್ಚಳವಾಗಿದೆ. ಇದೀಗ ರಾಜ್ಯ ಸರಕಾರ ತೈಲ ಬೆಲೆ ಹೆಚ್ಚಳ ಮಾಡಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದುದರಿಂದ ಕೂಡಲೇ ಬೆಲೆ ಹೆಚ್ಚಳವನ್ನು ರದ್ದು ಮಾಡಬೇಕು ಎಂದು ಧರಣಿನಿರತರು ಆರೋಪಿಸಿದರು.

ಬಿಸಿಯೂಟ ನೌಕರರಿಗೆ 1000ರೂ. ವೇತನ ಹೆಚ್ಚಳ ಮಾಡುವುದಾಗಿ ಹಿಂದಿನ ಸರಕಾರ ತನ್ನ ಕೊನೆಯ ಬಜೆಟ್ ಮಂಡಿಸುವಾಗಲೇ ಆಶ್ವಾಸನೆ ನೀಡಿತ್ತು. ಆದರೆ ಅದು ಈವರೆಗೆ ಜಾರಿ ಆಗಿಲ್ಲ. ಆಟೋ ಚಾಲಕರು ಸೇರಿದಂತೆ ಜಾಸಗಿ ವಾಣಿಜ್ಯ ವಾಹನಗಳಲ್ಲಿ ಕೆಲಸ ಮಾಡುವ ಎಲ್ಲಾ ನೌಕರರನ್ನು ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ ಸವಲತ್ತುಗಳನ್ನು ನೀಡುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಸವಲತ್ತುಗಳನ್ನು ಮಾಲಕರು ನೀಡುತ್ತಿಲ್ಲ, ಸರಕಾರ ಮಧ್ಯಪ್ರವೇಶಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಅವರು ಒತ್ತಾಯಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಧರಣಿಯಲ್ಲಿ ಪಕ್ಷದ ಉಡುಪಿ ವಲಯ ಸಮಿತಿ ಮುಖಂಡರಾದ ಕವಿರಾಜ್ ಎಸ್.ಕಾಂಚನ್, ಉಡುಪಿ ವಲಯ ಕಾರ್ಯ ದರ್ಶಿ ಶಶಿಧರ ಗೋಲ್ಲ, ರಾಮ ಕಾರ್ಕಡ ನಾಗೇಶ್, ರೀತೆಶ್, ಸಯ್ಯದ್, ಕಟ್ಟಡ ಸಂಘದ ಜಿಲ್ಲಾ ಅಧ್ಯಕ್ಷ ಶೇಖರ್ ಬಂಗೇರ, ಕೋಶಾಧಿಕಾರಿ ಗಣೇಶ ನಾಯ್ಕ, ಉಪಾಧ್ಯಕ್ಷ ದಯಾನಂದ ಕೋಟ್ಯಾನ್, ವಾಮನ ಪೂಜಾರಿ, ಉದಯ ಪೂಜಾರಿ, ಸುಭಾಸ್ ನಾಯಕ್ ಬ್ರಹ್ಮವಾರ, ಮುಖಂಡರಾದ ವಿಷ್ಣು ನಾಯ್ಕ, ಚಂದ್ರ ಪೂಜಾರಿ, ಪ್ರತಿಮಾ ಕಾಪು, ರಾಮ ಸಾಲ್ಯಾನ್, ಸಂಜೀವ ನಾಯ್ಕ್ ಉಪಸ್ಥಿತರಿದ್ದರು.

Latest Indian news

Popular Stories