
ಮಾ.26ರಂದು ಸಚಿವ ಕೋಟ ಮನೆ ಮುಂದೆ ಧರಣಿ: ವಿಶ್ವನಾಥ ಪೇತ್ರಿ
ಅಂಬೇಡ್ಕರ್ ಆವಾಜ್ ಮನೆ ನಿರ್ಮಾಣಕ್ಕಾಗಿ 7 ಲಕ್ಷ ರೂಪಾಯಿ ಸಹಾಯಧನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿ, ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತ್ ಗೆ ಆದೇಶ ನೀಡುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆ ಮುಂದೆ ಮಾರ್ಚ್ 26 ರಂದು ಬೆಳಿಗ್ಗೆ 10ಗಂಟೆಗೆ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿವುದು ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಸಿ, ಎಸ್ ಟಿ ಸಮುದಾಯದವರಿಗೆ ಸ್ವ ಉದ್ಯೋಗಕ್ಕಾಗಿ ರಿಕ್ಷಾ ನೀಡುವ ಬದಲು, ಸಚಿವರು ಮುಂದಿನ ದಿನಗಳಲ್ಲಿ ಆಯೋಜನೆ ಮಾಡಬೇಕಾಗಿರುವ ರ್ಯಾಲಿಗೆ ಕಾಲೇಜು ಹುಡುಗರಿಗೆ ಬೈಕ್ ಗಳನ್ನು ನೀಡುತ್ತಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಶಾಸಕ ರಘುಪತಿ ಭಟ್ರ ರಿಮೋಟ್ ಕಂಟ್ರೋಲ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಜ್ಯೋತಿ ಶಿರಿಯಾರ, ಸಂಘಟನಾ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಹೆಬ್ರಿ ಘಟಕದ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಮನೆ ಕಟ್ಟಲು ನೀಡುವ ಸಹಾಯಧನದ ಮೊತ್ತವನ್ನು 7 ಲಕ್ಷಕ್ಕೆ ಏರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಆದರೆ ಇದು ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇದು ಸಮಾಜ ಕಲ್ಯಾಣ ಸಚಿವರ ವೈಫಲ್ಯತೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲದೇ 29 ಸಾವಿರ ಕೋಟಿ ರೂ.ಗಳನ್ನು ವಾರಾಹಿ ಯೋಜನೆಗೆ ಡಂಪ್ ಮಾಡಿ ಅದರ ಮೂಲಕ ಅಲ್ಲಲ್ಲಿ ಕೊಳವೆ ಬಾವಿಗಳನ್ನು ತೋಡಲು 8 ಲಕ್ಷ ರೂಪಾಯಿ ನೀಡಲಾಗುತ್ತಿದೆ. 2 ಲಕ್ಷ ರೂಪಾಯಿ ಖರ್ಚಾಗುವ ಕೊಳವೆ ಬಾವಿಗೆ 8 ಲಕ್ಷ ರೂಪಾಯಿ ಮಂಜೂರು ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.



