ಉಡುಪಿ | ಚೆಕ್ ಬೌನ್ಸ್ ಪ್ರಕರಣ: ಆರೋಪಿಗೆ18 ತಿಂಗಳು ಜೈಲು

ಹೆಬ್ರಿ: ಕಾರ್ಕಳದ ನ್ಯಾಯಾಲಯವು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ವ್ಯಕ್ತಿಯೊಬ್ಬರಿಗೆ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ 18 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ನಾಡ್ಪಾಲು ಗ್ರಾಮದ ಬೈದೆ ಬೆಳಾರ ನಿವಾಸಿ ಶಿವರಾಮ ಪೂಜಾರಿ ಅವರು ಪರಿಚಯಸ್ಥ ಮಡಾಮಕ್ಕಿ ಗ್ರಾಮದ ಕಾಸನಮಕ್ಕಿ ಕೊಡ್ಸನ್‌ ಬೈಲು ನಿವಾಸಿ ದಿನಕರ ನಾಗು ಶೆಟ್ಟಿ ಅವರಿಗೆ 2016ರಲ್ಲಿ ಮೂರು ತಿಂಗಳ ಮಟ್ಟಿಗೆ 3,32,000 ರೂ. ನೀಡಿದ್ದು, ಮರುಪಾವತಿಗಾಗಿ ದಿನಕರ ಶೆಟ್ಟಿ 3 ಚೆಕ್‌ಗಳನ್ನು ನೀಡಿದ್ದರು. ಅವು ಬೌನ್ಸ್‌ ಆದ ಹಿನ್ನೆಲೆಯಲ್ಲಿ ಶಿವರಾಮ ಪೂಜಾರಿ ಕಾರ್ಕಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಸುದೀರ್ಘ‌ವಾದ ವಿಚಾರಣೆ ಬಳಿಕ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ದಿನಕರ ಶೆಟ್ಟಿ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿದ ನ್ಯಾಯಾಲಯ, ಇನ್ನು ಒಂದು ತಿಂಗಳ ಒಳಗೆ ಖರ್ಚು ವೆಚ್ಚಗಳು ಸೇರಿ 4,35,000 ರೂ. ಅನ್ನು ಶಿವರಾಮ ಪೂಜಾರಿಗೆ ನೀಡಬೇಕು. ತಪ್ಪಿದ್ದಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಿಗೆ ತಲಾ ಆರು ತಿಂಗಳಂತೆ ಒಟ್ಟು 18 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ಶಿವರಾಮ ಪೂಜಾರಿ ಪರ ನ್ಯಾಯವಾದಿ ಎಚ್‌. ರತನ್‌ ಕುಮಾರ್‌ ಹೆಬ್ರಿ ವಾದಿಸಿದ್ದಾರೆ.

Latest Indian news

Popular Stories