ಉಡುಪಿ | ಸೌಜನ್ಯ ಪರ ಪ್ರತಿಭಟನೆಯಲ್ಲಿ: ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಮಾತನಾಡದಂತೆ ಆಗ್ರಹಿಸಿ ಮನವಿ

ಉಡುಪಿ, ಸೆ.20: ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ಸೆ.24ರಂದು ನಡೆಯುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡದಂತೆ ಮುಚ್ಚಳಿಕೆ ಬರೆಸಿಕೊಂಡು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕೆಂದು ಒತ್ತಾಯಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಕಾರ್ಕಳ ಇದರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಸೌಜನ್ಯ ಪರ ಹೋರಾಟದ ದಿಕ್ಕು ತಪ್ಪುತ್ತಿದ್ದು, ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಯಾವುದೇ ದಾಖಲೆ ಇಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಜೊತೆಗೆ ಧರ್ಮ ಧರ್ಮಗಳ ಮಧ್ಯೆ ವೈಮನಸ್ಸು, ಧ್ವೇಷ ಹುಟ್ಟಿಕೊಳ್ಳುತ್ತದೆ. ಈಗಾಗಲೇ ನ್ಯಾಯಾಲಯದಲ್ಲಿ ಧರ್ಮಸ್ಥಳದ ಬಗ್ಗೆ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡದಂತೆ ಹಾಗೂ ನಿರ್ಬಂಧಕಾಜ್ಞೆ ಆಗಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ಯಾವುದೇ ಬೆಲೆ ಕೊಡುತ್ತಿಲ್ಲ.

ಈ ಹಿಂದಿನ ಸಭೆಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಕುಸುಮಾವತಿ ಹಾಗೂ ಇತರರು ಹಿಂದು ಸಮಾಜದ ಧಾರ್ಮಿಕ ಭಾವನೆಗಳಿಗೆ ಕುಂದು ಉಂಟು ಮಾಡುವ, ಡಾ.ವೀರೇಂದ್ರ ಹೆಗ್ಗಡೆಯವರನ್ನು ತೇಜೋವಧೆ ಮಾಡುವಂತಹ ಮಾತುಗಳನ್ನು ಬಹಿರಂಗವಾಗಿ ಹೇಳುವ ಮೂಲಕ ಜನಸಾಮಾನ್ಯರಲ್ಲಿ ಗೊಂದಲ ಉಂಟು ಮಾಡಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.ಮನವಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಹಾಗೂ ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ಸುರೇಶ್ ಶೆಟ್ಟಿ ಶಿವಪುರ, ರವೀಂದ್ರ ಮಡಿವಾಳ, ಅಂಥೋನಿ ಡಿಸೋಜ, ಸುಭಾಷ್ಚಂದ್ರ ಚೌಡ, ಶೀತಲ್ ಜೈನ್, ಆಕಾಶ್ರಾಜ್ ಜೈನ್, ಲಲಿತಾ ಮೊದಲಾದವರು ಉಪಸ್ಥಿತರಿದ್ದರು

Latest Indian news

Popular Stories