ಉಡುಪಿ : ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆಗೆ ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

 

ಉಡುಪಿ : ಸೆಪ್ಟೆಂಬರ್ 22 : ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಟಿ. ನಾರಾಯಣಗೌಡ ಬಣ) ಉಡುಪಿ ಜಿಲ್ಲಾ ಕಾರ್ಯಕರ್ತರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದರು.

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಷ್ಟು ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ವಾಡಿಕೆಯಂತೆ ಮಳೆ ಆಗಿಲ್ಲ. ಈಗಾಗಲೇ 236 ತಾಲೂಕುಗಳ ಪೈಕಿ 192 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವೇ ಘೋಶಿಸಿದ್ದು, ನಮ್ಮ ರಾಜ್ಯದ ಬೆನ್ನೆಲುಬಾಗಿರುವ ರೈತರ ಜೀವನದಿ ಕಾವೇರಿಯ ನೀರು ತಮಿಳುನಾಡಿಗೆ ಬಿಡದಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಛೇರಿಯ ಗೇಟ್ ಬಳಿಯೇ ಮಣಿಪಾಲ ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನೆ ಕೈ ಬಿಟ್ಟು ವಾಪಸು ಹೋಗಿ ಎಂದು ಪೊಲೀಸರು ಎಚ್ಚರಿಸಿದರು.

ಅದಕ್ಕೆ ಒಪ್ಪದ ಕಾರ್ಯಕರ್ತರು, ಸ್ಥಳದಲ್ಲಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದರು. ಪೊಲೀಸರನ್ನು ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು.

ಇದೇ ಸಂದರ್ಭದಲ್ಲಿ ಪೊಲೀಸರು, ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಸೇರಿದಂತೆ ಕಾರ್ಯಕರ್ತರಾದ ಸುಂದರ್ ಬಂಗೇರ, ಗೀತಾ ಪಾಂಗಾಳ, ಜಯ ಪೂಜಾರಿ, ಸಂತೋಷ ಕುಲಾಲ್, ದೇವಕಿ ಬಾರ್ಕೂರ್, ಸಿದ್ದಣ್ಣ ಎಸ್. ಪೂಜಾರಿ, ಕೃಷ್ಣ ಪಾಂಗಾಳ, ಜ್ಯೋತಿ, ಜ್ಯೋತಿ ಆರ್, ಎಸ್. ಆರ್. ಲೋಬೋ ರಾಘವೇಂದ್ರ ನಾಯಕ್, ಪ್ರಮೋದ್ ಕುಲಾಲ್, ಜಯ ಸಾಲ್ಯಾನ್, ಸರಿತಾರವರನ್ನು ವಶಕ್ಕೆ ಪಡೆದರು. ಎಲ್ಲರನ್ನೂ ಪೊಲೀಸ್ ವಾಹನದಲ್ಲಿ ಮಣಿಪಾಲ ಪೊಲೀಸ್ ಠಾಣೆಗೆ ಕರೆದೊಯ್ದರು. ಕೆಲ ಗಂಟೆಗಳ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದರು.

ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರ ಬರಗಾಲವಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ, ಜನರಿಗೆ ಸಂಕಷ್ಟ ಎದುರಾಗಲಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಜನರ ಆಗ್ರಹವನ್ನು ಧಿಕ್ಕರಿಸಿ ನೀರು ಹರಿಸಿದರೆ, ಗಂಭೀರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಕರವೇ ಕಾರ್ಯಕರ್ತರು ಎಚ್ಚರಿಸಿದರು.

Latest Indian news

Popular Stories