ಉಡುಪಿ: ಜೂನ್ 26ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಪ್ರತಿಭಟನೆ

ಹಾಲಿನ ಪ್ರೋತ್ಸಾಹ ಧನ ಲೀಟರಿಗೆ 10 ರೂ. ಏರಿಕೆ ಮಾಡಬೇಕು ಎನ್ನುವುದು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಉಡುಪಿ: ಹಾಲಿನ ಪ್ರೋತ್ಸಾಹ ಧನ ಲೀಟರಿಗೆ 10 ರೂ. ಏರಿಕೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ಇದೇ ಜೂ. 26ರಂದು ಬೆಳಿಗ್ಗೆ 10.30ಕ್ಕೆ ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆಗೆ 900ರೂ ಕೋಟಿಗಿಂತಲೂ ಹೆಚ್ಚು ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಬಾಕಿ ಇದ್ದು, ಅದನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಹಾಲಿನ ಪ್ರೋತ್ಸಾಹ ಧನವನ್ನು ಲೀಟರಿಗೆ 10 ರೂಪಾಯಿ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ತೈಲ ಬೆಲೆ ಏರಿಕೆಯಿಂದ ರೈತಾಪಿ ವರ್ಗ ಕಂಗಾಲಾಗಿದ್ದು, ತಕ್ಷಣ ತೈಲ ಬೆಲೆಯನ್ನು ಇಳಿಸಬೇಕು. ಬಿತ್ತನೇ ಬೀಜವನ್ನು ಸಬ್ಸಿಡಿ ದರದಲ್ಲಿ ನೀಡಬೇಕು. ಜಿಲ್ಲೆಯಲ್ಲಿ ವ್ಯವಸ್ಥಿತ ಕೃಷಿ ಕಾಲೇಜು ಆರಂಭಿಸಬೇಕು. ಜಿಲ್ಲೆಯ ರೈತರ ಬಗರ್ ಹುಕುಂ ಬೇಡಿಕೆ ಹಾಗೂ ಅಕ್ರಮ ಸಕ್ರಮ ಸಮಿತಿಯ ಮೂಲಕ ಸಂಬಂಧಪಟ್ಟ ರೈತರಿಗೆ ತಕ್ಷಣ ಶಾಶ್ವತ ಆದೇಶ ಪತ್ರ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಬೈಂದೂರು ಪುಷ್ಪರಾಜ್ ಶೆಟ್ಟಿ, ಶ್ರೀಕಾಂತ್ ಕಾಮತ್ ಉಪಸ್ಥಿತರಿದ್ದರು.

Latest Indian news

Popular Stories