ಮುಂಗಾರು ವಿಪತ್ತು ನಿರ್ವಹಣೆಗೆ ಸರ್ವಸನ್ನಧ್ದರಾಗಿ: ಜಿಲ್ಲಾಧಿಕಾರಿ

ಕಾರವಾರ : ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಸಂದರ್ಭದಲ್ಲಿ ತಲೆದೋರುವ ಯಾವುದೇ ರೀತಿಯ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಗಳು ಸರ್ವ ಸನ್ನದ್ದರಾಗುವಂತೆ ಮತ್ತು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು,ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಅಧ್ಯಕ್ಷೆ ವಹಿಸಿ ಮಾತನಾಡಿದರು.

ಜಿಲ್ಲೆಯ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಒಳ ಚರಂಡಿ ಹಾಗೂ ನೀರು ಹರಿದು ಹೋಗುವ ಕಾಲುವೆಗಳನ್ನು ಸ್ವಚ್ಚಗೊಳಿಸಬೇಕು. ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಚಗೊಳಿಸಿ, ಯಾವುದೇ ರೀತಿಯಲ್ಲಿ ಕಲುಷಿತಗೊಳ್ಳದಂತೆ ಎಚ್ಚರವಹಿಸುವುದರ ಜೊತೆಗೆ ಸಾರ್ವಜನಿಕರ ಕುಂದುಕೊರತೆಗೆ ಗ್ರಾಮೀಣ ಮಟ್ಟದಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಸ್ಪಂದಿಸಲು ದಿನದ 24 ತಾಸೂ ಕಂಟ್ರೋಲ್ ರೂಮ್ ಸ್ಥಾಪಿಸುವಂತೆ ತಿಳಿಸಿದರು.

ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅವಘಡಗಳು ಸಂಭವಿಸಬಹುದಾದ ಸ್ಥಳಗಳ ಗುರುತಿಸಬೇಕು. ಸಾರ್ವಜನಿಕರ ಕುಂದುಕೊರತೆಗೆ ಸ್ಪಂಧಿಸಲು 24 ತಾಸೂ ಕಂಟ್ರೋಲ್ ರೂಮ್ ಸ್ಥಾಪನೆ ಮಾಡುವಂತೆ ಪೋಲಿಸ್ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಾ ಮಟ್ಟದ ವಿಪತ್ತು ನಿರ್ವಹಣಾ ಯೋಜನೆ
ಜಿಲ್ಲೆಯ ಎಲ್ಲಾ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಗಳು, ತಾಲೂಕಾ ಮಟ್ಟದ ಹಾಗೂ ಉಪವಿಭಾಗ ಮಟ್ಟದ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿ, ಪ್ರವಾಹ ಸಂಭವಿಸಬಹುದಾದಂತಹ ಪ್ರದೇಶಗಳನ್ನು ಗುರುತಿಸಬೇಕು. ಆ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ರಕ್ಷಣಾ ಕಾರ್ಯಾಚರಣೆಯ ಕುರಿತಂತೆ, ಮುಳುಗುತಜ್ಞರ ವಿವರ, ವೃತ್ತಿಪರ ಈಜುಗಾರರ ವಿವರ, ದೋಣಿಗಳ ಮಾಲೀಕರ ವಿವರ, ಕಾಳಜಿ ಕೇಂದ್ರಗಳು ವಿವರಗಳನ್ನೊಳಗೊಂಡ ಸವಿವರವಾದ ತಾಲೂಕಾ ಮಟ್ಟದ ಹಾಗೂ ಉಪವಿಭಾಗ ಮಟ್ಟದ ವಿಪತ್ತುನಿರ್ವಹಣಾ ಯೋಜನೆ ಕ್ರೀಯಾಯೋಜನೆಯನ್ನು ತಯಾರಿಸಬೇಕು.
ಸರ್ಕಾರದ ಮಾರ್ಗಸೂಚಿಯನ್ವಯ ತಕ್ಷಣ ಪರಿಹಾರ ವಿತರಣೆ, ಮುಂಗಾರು ಪೂರ್ವಸಿದ್ಧತೆಗೆ ಸಂಬಂಧಿಸಿದ ತಾಲೂಕಾ ಮಟ್ಟದಲ್ಲಿ ಹಾಗೂ ಉಪವಿಭಾಗ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಬೇಕು.ಹಾನಿಯ ವರದಿಯನ್ನು ನಿಗಧಿತ ನಮೂನೆಯಲ್ಲಿ ಅಪಡೇಟ್ ಮಾಡುವುದರ ಜೊತೆಗೆ ಸಾರ್ವಜನಿಕರ ಕುಂದುಕೊರತೆಗೆ ಸ್ಪಂದಿಸುವ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಬೇಕು ಎಂದರು.

ಮಳೆಗಾಲದಲ್ಲಿ ಉಂಟಾಗಬಹುದಾದ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿಗಳಿಗೆ ತಗಲುವ ಮರ ಗಿಡಗಳ ಟೊಂಗೆಗಳನ್ನು ಕತ್ತರಿಸಿ ಹಾನಿ ಉಂಟಾಗದಂತೆ ಮುಂಚಿತವಾಗಿ ಕ್ರಮ ಕೈಕೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಡಿಸಿಎಫ್ ರವಿಶಂಕರ್ , ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
……..

Latest Indian news

Popular Stories