ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಕೈ ಸೇರಲಿದೆ ನೂತನ ಮೊಬೈಲ್

ಕಾರವಾರ : ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅನುಷ್ಠಾನಗೊಂಡಿರುವ ಪೋಷಣ ಅಭಿಯಾನ ಕಾರ್ಯಕ್ರಮದ ದೈನಂದಿನ ಪ್ರಗತಿಯನ್ನು ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ದಾಖಲಿಸಲು ಹಾಗೂ ಇತರೆ ತಾಂತ್ರಿಕ ವರದಿಗಳನ್ನು ನೀಡಲು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರಿಗೆ ಹೊಸ ಸ್ಯಾಮ್ಸಂಗ್ 005 ಮೊಬೈಲ್ ಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರ ಕೈ ಸೇರಲಿದೆ.

ಈಗಾಗಲೇ ಅಂಕೋಲಾ ತಾಲೂಕಿನ 236 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ, ಭಟ್ಕಳದ235, ಹಳಿಯಾಳದ 256, ಹೊನ್ನಾವರದ 341, ಜೋಯಿಡಾದ 220, ಕಾರವಾರದ 253, ಕುಮಟಾದ 293, ಮುಂಡಗೋಡದ 201, ಸಿದ್ದಾಪುರದ 237, ಶಿರಸಿಯ 389, ಯಲ್ಲಾಪುರದ 205 ಸೇರಿದಂತೆ ಒಟ್ಟು 2782 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 84 ಮೇಲ್ವಿಚಾರಕರಿಗೆ ಹಾಗೂ ಬಫರ್ ಸ್ಟಾಕ್ ನಲ್ಲಿನ 143 ಸೇರಿದಂತೆ ಒಟ್ಟು 3009 ಹೊಸ ಮೊಬೈಲ್‌ಗಳು ಜಿಲ್ಲೆಗೆ ಪೂರೈಕೆಯಾಗಿವೆ. ಸಂಬಂಧಪಟ್ಟ ತಾಲೂಕು ಶಿಶು ಅಭಿವೃಧ್ದಿ ಯೋಜನಾಧಿಕಾರಿಗಳ ಕಚೇರಿಯ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಈ ಮೊಬೈಲ್‌ಗಳಿಗೆ ಇಲಾಖೆಯ ಮೂಲಕವೇ ಪ್ರತೀ ತಿಂಗಳು ನಿಗಧಿತ ಮೊತ್ತದ ಕರೆನ್ಸಿಯನ್ನು ರೀಚಾರ್ಜ್ ಮಾಡಲಾಗುತ್ತದೆ.

ಪೋಷಣ್ ಅಭಿಯಾನ ಕಾರ್ಯಕ್ರಮದ ಮೂಲಕ 0-6 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯನ್ನು ಕಡಿಮೆಗೊಳಿಸುವ, ಕಿಶೋರಿಯರಲ್ಲಿ ಮತ್ತು ಮಹಿಳೆಯರಲ್ಲಿ ರಕ್ತ ಹೀನತೆಯನ್ನು ತಡೆಗಟ್ಟುವ ಮತ್ತು ಕಡಿಮೆ ತೂಕದ ಮಗುವಿನ ಜನನವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

ಅಂಗನವಾಡಿಗೆ 67,472 ಮಕ್ಕಳು :ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 67,472 ಮಕ್ಕಳು ಅಂಗನವಾಡಿಗಳಲ್ಲಿ ನೋಂದಣಿಯಾಗಿದ್ದು, ಇದರಲ್ಲಿ 66,406 ಮಕ್ಕಳ ಎತ್ತರ ಮತ್ತು ತೂಕವನ್ನು ಅಳತೆ ಮಾಡಲಾಗಿದೆ.‌ ಮಕ್ಕಳಲ್ಲಿನ ಆರೋಗ್ಯಕರ ಬೆಳವಣಿಗೆ ಪ್ರಮಾಣ ಶೇ.98.42 ರಷ್ಟು ಕಂಡುಬಂದಿದೆ. ಹಾಗೂ ಅ ಪರೀಕ್ಷಾ ಅವಧಿಯಲ್ಲಿ ತೀವ್ರ ಅಪೌಷ್ಠಿಕತೆಯ 262 ಮತ್ತು ಮಧ್ಯಮ ತೀವ್ರ ಅಪೌಷ್ಠಿಕತೆಯ 1178 ಮಕ್ಕಳು ಕಂಡು ಬಂದಿದ್ದು, ಈ ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸಲು ಅಗತ್ಯವಿರುವ ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಎಲ್ಲಾ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಸ್ತುತ ನೀಡಿರುವ ಮೊಬೈಲ್ ಮೂಲಕ ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ, ಜಿಲ್ಲೆಯ ಅಂಗನವಾಡಿಯಲ್ಲಿರುವ ಮಕ್ಕಳ ವಯಸ್ಸು, ಎತ್ತರ, ತೂಕ ಆರೋಗ್ಯದ ಸ್ಥಿತಿಗತಿ ಸೇರಿದಂತೆ ಮಕ್ಕಳ ಸಮಗ್ರ ಆರೋಗ್ಯದ ವಿವರಗಳನ್ನು ದಾಖಲು ಮಾಡುವುದರ ಮೂಲಕ ಮಕ್ಕಳಲ್ಲಿ ಕಂಡು ಬರುವ ಅಪೌಷ್ಠಿಕತೆಗೆ ಸಕಾಲದಲ್ಲಿ ಸೂಕ್ತ ನೆರವು ನೀಡಿ, ಅವರು ಆರೋಗ್ಯವಂತರಾಗಿ ಬೆಳವಣಿಗೆ ಹೊಂದಲು ಬೇಕಾದ ಎಲ್ಲಾ ಅಗತ್ಯ ಪೂರಕ ವ್ಯವಸ್ಥೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಅಂಗನವಾಡಿಯಲ್ಲಿ ಪ್ರತಿದಿನ ನಡೆಯುವ ಚಟುವಟಿಕೆಗಳನ್ನು ಕೂಡಾ ಈ ಮೊಬೈಲ್ ಮೂಲಕ ದಾಖಲಿಸಲಾಗುತ್ತಿದ್ದು, ಪ್ರತಿದಿನ ಅಂಗನವಾಡಿ ತೆರೆದಿರುವ ಬಗ್ಗೆ, ಮಕ್ಕಳು ಹಾಜರಾಗಿರುವ ಬಗ್ಗೆ, ಮಕ್ಕಳಿಗೆ ಪೌಷ್ಠಿಕ ಉಪಹಾರ ನೀಡುವ ಕುರಿತ ಪೋಟೋಗಳನ್ನೂ ಹಾಗೂ ಗರ್ಭಿಣಿ ಸ್ತ್ರೀಯರು ಮತ್ತು ಬಾಣಂತಿಯ ಅರೋಗ್ಯ ವಿಚಾರಣೆಗೆ ಪ್ರತಿದಿನ ಮನೆ ಭೇಟಿ ನೀಡುವ ವಿವರಗಳನ್ನೂ ಸಹ ಈ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದ್ದು, ಅಂಗನವಾಡಿ ಕಾರ್ಯಕತೆಯರು ಅಳವಡಿಸುವ ಈ ಎಲ್ಲಾ ಮಾಹಿತಿಯು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ನೇರವಾಗಿ ದೊರೆಯುವಂತೆ ತಂತ್ರಾಂಶ ಸಿದ್ದಪಡಿಸಲಾಗಿದೆ.

………
ಪೋಷಣ್ ಟ್ರ್ಯಾಕರ್ ಆಪ್‌ನ ಸುಲಲಿತ ಕಾರ್ಯ ನಿರ್ವಹಣೆಗೆ ಸೇರಿದಂತೆ, ಕ್ಷೇತ್ರ ಮಟ್ಟದಲ್ಲಿ ಅಗತ್ಯವಿರುವ ಇತರೆ ಯಾವುದೇ ಮಾಹಿತಿಯನ್ನು ಸಂಗ್ರಹಿಸಿ, ವರದಿ ಮಾಡಲು ಇದು ನೆರವು ನೀಡಲಿದ್ದು, ಅಂಗನವಾಡಿ ಸಿಬ್ಬಂದಿಗಳು ಇನ್ನಷ್ಟು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.

Latest Indian news

Popular Stories