ಕಾರವಾರ: ಅಮೇರಿಕಾ ಪ್ರವಾಸದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಬಿಜೆಪಿಯವರು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಹೇಳಿದರು.
ಕಾರವಾರ ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿಯ ಸಂಸದರು, ಜಿಲ್ಲಾ ಬಿಜೆಪಿ ವಕ್ತಾರರು ಹಾಗೂ ಹಳಿಯಾಳದ ಮಾಜಿ ಶಾಸಕ ಸುನೀಲ ಹೆಗಡೆ ,ಈ ಮೂವರು ರಾಹುಲ್ ಗಾಂಧಿ ಅವರ ಅಮೆರಿಕಾ ಪ್ರವಾಸದ ಭಾಷಣದ ಹಿನ್ನೆಲೆಯಲ್ಲಿ ಟೀಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಮೀಸಲಾತಿ ಹೋಗಲಾಡಿಸುತ್ತೇವೆ ಎಂದು ಹೇಳಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಬಿಜೆಪಿಯು ಅರ್ಧ ಸತ್ಯ ಹೇಳುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರ ಭಾಷಣದ ಪೂರ್ಣ ವಾಖ್ಯೆಯನ್ನು ಆಲಿಸದೇ, ಕೇಳದೇ , ಟೀಕೆ ಮಾಡಲಾಗುತ್ತಿದೆ. ದೇಶದಲ್ಲಿ ಸಮಾನತೆ ಬರುವವರೆಗೆ ಮೀಸಲಾತಿ ಇರಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಮಾನತೆ ಬಂದ ಬಳಿಕ ಮೀಸಲಾತಿ ತೆಗೆಯುವ ಬಗ್ಗೆ ಯೋಚಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಈ ಪೂರ್ಣ ವಾಖ್ಯೆವನ್ನು ಬಿಜೆಪಿಗರು, ಜನರಿಗೆ ಹೇಳುತ್ತಿಲ್ಲ ಎಂದು ಕಿಡಿಕಾರಿದರು. ಇಂತಹ ಕಿತಾಪತಿ ಮಾಡುವಲ್ಲಿ ಬಿಜೆಪಿಯವರು ಎಕ್ಸಪರ್ಟ ಆಗಿದ್ದಾರೆ.
ದೇಶದಲ್ಲಿ ಪಾದಯಾತ್ರೆ ಮಾಡಿ ಸಮಾನತೆಯ ಬಗ್ಗೆ ವಿಷಯ ಸಂಗ್ರಹ ಮಾಡಲಾಗಿದೆ. ದೇಶದಲ್ಲಿ ಶೇ.90 ರಷ್ಟು ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ವರ್ಗದವರಿದ್ದಾರೆ. ಆದರೆ ಉಳಿದ ಶೇ. 10 ರಷ್ಟು ಜನರು ದೇಶದ ಆಡಳಿತ ನಡೆಸುತ್ತಿದ್ದಾರೆ. ಆಳುವವರಲ್ಲಿ ಸಹ ದಲಿತರು, ಹಿಂದುಳಿದವರು, ಆದಿವಾಸಿಗಳು ಆಡಳಿತದಲ್ಲಿ ಇರಬೇಕು. ಅಧಿಕಾರ ಹಂಚಿಕೆಯಲ್ಲಿಯೂ ಸಮಾನತೆ ನೀಡಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಮುಂಬರುವ ಹರಿಯಾಣ, ಹಾಗೂ ಮಹಾರಾಷ್ಟದ ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ರಾಜಕಾರಣಿಗಳು ಮೂಲ ಹೇಳಿಕೆ ತುರುಚಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ರಾಣೆ, ನಿವೃತ್ತ ಪ್ರಾಂಶುಪಾಲ ಜಿ.ಪಿ.ನಾಯಕ, ಮಚ್ಚೇಂದ್ರ ಮಹಾಲೆ, ಬಾಬು ಶೇಖ್, ಸಿ.ಜಿ.ನಾಯ್ಕ, ಪ್ರಕಾಶ ಸಾವಂತ ಇದ್ದರು.
….