ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಮಂತ್ರಿ ಮೋದಿ ನಡುವೆ ವೈಮನಸ್ಸು, ಮೋದಿ ಆಪ್ತ ಅರವಿಂದ್ ಕುಮಾರ್ ಶರ್ಮಾ ಉಪಮುಖ್ಯಮಂತ್ರಿ ಆಗುವ ಸಾಧ್ಯತೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಎದ್ದಿದೆ. ಈಗಾಗಲೇ ಕೋವಿಡ್ ಅಲೆಯ ನಿಯಂತ್ರಣದ ಬಗ್ಗೆ ಮತ್ತು ಅದೇ ರೀತಿ ನದಿಯಲ್ಲಿ ತೇಲಾಡುತ್ತಿದ್ದ ಮೃತ ದೇಹಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದಾಗ ಉತ್ತರಪ್ರದೇಶದ ಹಿರಿಯ ನಾಯಕರು ಧ್ವನಿ ಎತ್ತಿದ್ದರು.

ಎರಡು ದಿನಗಳ ಹಿಂದೆ ನಡೆದ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಉತ್ತರಪ್ರದೇಶದ ಕೋವಿಡ್ ನಿಯಂತ್ರಣದ ಚರ್ಚೆಯಾಗಿವೆ ಮತ್ತು ನಾಯಕತ್ವ ಬದಲಾವಣೆಯಿಲ್ಲ ಎಂಬುದನ್ನು ಕೂಡ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದರು. ಆದರೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದ ತಂಡ ಉತ್ತರಪ್ರದೇಶ ಪ್ರವಾಸ ನಡೆಸಿ ಅಂತಿಮ ವರದಿಯನ್ನು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾರಿಗೆ ನೀಡಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಚುನಾವಣೆಗೆ ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷರನ್ನು ಬದಲಿಸಿ ಹೊಸ ಅಧ್ಯಕ್ಷರನ್ನು ನೇಮಿಸಲು ಚರ್ಚೆ ನಡೆದಿದೆ. ಉತ್ತರ ಪ್ರದೇಶ ಸರ್ಕಾರದ ಉಪಮುಖ್ಯಮಂತ್ರಿ ಕೇಶವ್ ಪ್ರಶಾದ್ ಮೌರ್ಯ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಕೇಶವ್ ಪ್ರಶಾದ್ ಮೌರ್ಯ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಉನ್ನತ ಮಟ್ಟದ ಸಭೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದ್ದು, ಈ ಸಭೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಬೇಕೆಂಬುದು ಕೂಡ ಈ ಸಭೆಯ ಚರ್ಚಾ ವಿಷಯ.

ಮೇಲ್ನೋಟಕ್ಕೆ, ಈ ಸಭೆಯು ಮಾರ್ಚ್ 2022 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯ ತಯಾರಿಯ ಬಗ್ಗೆ ಚರ್ಚೆ ನಡೆಸಲು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಆದಿತ್ಯನಾಥ್ ಮತ್ತು ಪ್ರಧಾನಮಂತ್ರಿ ಮೋದಿ ನಡುವಿನ ವೈಮನಸ್ಸು ಶಮನಗೊಳ್ಳಿಸುವ ಬಗ್ಗೆ ಕೂಡ ಚರ್ಚೆ ಆಗಲಿದೆ.

ಮೋದಿಯ ಆಪ್ತ ಗುಜರಾತ್ ಕೇಡರ್ ಸೇವಾ ನಿವೃತ್ತಿ ಪಡೆದ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಶರ್ಮಾ ಅವರು ಉತ್ತರಪ್ರದೇಶದಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರನ್ನು ರಾಜ್ಯದ ಉಪಮುಖ್ಯಮಂತ್ರಿ ಮಾಡುವ ಚರ್ಚೆ ನಡೆದಿತ್ತು. ಆದರೆ ಯೋಗಿ ಆದಿತ್ಯನಾಥ್ ಇದನ್ನು ವಿರೋದಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

Latest Indian news

Popular Stories