ಕಾರವಾರ ನಗರದಲ್ಲಿ ಕುಡಿಯುವ ನೀರಿನ‌ ಸಮಸ್ಯೆ : ಆತಂಕದಲ್ಲಿ ಜನತೆ

ಕಾರವಾರ: ಕಾರವಾರ ನಗರಕ್ಕೆ ಕಳೆದ 15 ದಿನಗಳಿಂರ ನೀರು ಪೂರೈಕೆಗೆ ಸ್ಥಗಿತವಾಗಿದೆ. ಜನರು ಹಣ ಕೊಟ್ಟು ಕ್ಯಾನ್ ಗಳಲ್ಲಿ ಕುಡಿಯುವ ನೀರನ್ನು ತಂದು ಬದುಕು ಸಾಗಿಸುತ್ತಿದ್ದಾರೆ. ಮನೆಯಲ್ಲಿ ಬಾವಿ ಹೊಂದಿರುವ ಜನರು ಕುಡಿಯುವ ನೀರಿನ ಬವಣೆಯಿಂದ ಕೊಂಚ ಪಾರಾಗಿದ್ದಾರೆ. ನಲ್ಲಿ ನೀರು ಆಶ್ರಯಿಸಿದ್ದ ಜನರ ಬದುಕು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಬೋರ್ ವೆಲ್ ನೀರು ಕುಡಿಯುಲು ಯೋಗ್ಯ ಇಲ್ಲದ ಕಾರಣ‌ ಆ‌ ನೀರನ್ನು ಸ್ನಾನ ಮತ್ತು ಬಟ್ಟೆ ಸೆಳೆಯಲು ಬಳಸುತ್ತಿದ್ದಾರೆ.
ಕುಡಿಯುವ ನೀರಿನ ಆಶ್ರಯವಾಗಿದ್ದ
ಗಂಗಾವಳಿ ನದಿಯ ಒಡಲು ಬತ್ತಿರುವ ಪರಿಣಾಮ ನೀರು ಪೂರೈಕೆ ನಗರಕ್ಕೆ
ಸ್ಥಗಿತಗೊಂಡಿದೆ. ಎರಡು ವಾರಗಳಿಂದ ನೀರು ಪೂರೈಕೆ ಇಲ್ಲದೆ ಜನರು ಪರದಾಡುತ್ತಿರುವುದು ಒಂದೆಡೆಯಾದರೆ, ಟ್ಯಾಂಕರ್ ನೀರಿಗೆ ಶುಲ್ಕ ಏರಿಸಿರುವುದು ಜನರನ್ನು ಮತ್ತಷ್ಟು ಚಿಂತೆಗೆ ದೂಡಿದೆ .

ಕಾರವಾರ ಹೊರ ವಲಯದ ಬೈತಕೋಲ, ಅಲಿಗದ್ದಾ ಸೇರಿದಂತೆ ಹಲವು ಪ್ರದೇಶಕ್ಕೆ ಹತ್ತು ದಿನಗಳಿಗೂ ಹೆಚ್ಚು ಕಾಲದಿಂದ ನೀರು ಪೂರೈಕೆ ಆಗಿಲ್ಲ. ಹೊಸ
ಕೆ.ಎಚ್.ಬಿ ಕಾಲೊನಿ ಸೇರಿದಂತೆ ಇನ್ನಿತರ ಪ್ರದೇಶಕ್ಕೆ ಹತ್ತು ದಿನಗಳಿಂದ ನೀರು ಪೂರೈಕೆ ಆಗಿಲ್ಲ ಎಂದು ಸಾರ್ವಜನಿಕರು ನಗರಸಭೆಗೆ ಅಲೆದು ದೂರು ದಾಖಲಿಸುತ್ತಿದ್ದಾರೆ.

ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಕಾರಣ ಪ್ರತಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿತ್ತು. ಆದರೆ, ಮೂರು ದಿನ ಕಳೆದು ಈಗ ಹತ್ತು ದಿನಗಳಾದರೂ ನಲ್ಲಿಯಲ್ಲಿ ನೀರು ಬಂದಿಲ್ಲ‌ . ಹತ್ತು ದಿನ ದಾಟಿದರೂ ನೀರು ಪೂರೈಕೆ ಸಾಧ್ಯವಿಲ್ಲದಂತಾಗಿದೆ. ನಗರಸಭೆಯಿಂದ ಪೂರೈಕೆಯಾಗುವ ನೀರನ್ನೇ ಅವಲಂಭಿಸಿದ್ದ ಜನರು ಕಷ್ಟ ಅನುಭವಿಸುವಂತಾಗಿದೆ.

ಮೊದಲು ದಿನ ಬಿಟ್ಟು ದಿನ ಬರುತ್ತಿದ್ದ ನೀರು ಮಾರ್ಚ್ ಮಧ್ಯಂತರದ ಬಳಿಕ ಎರಡು ದಿನಕ್ಕೊಮ್ಮೆ ಪೂರೈಕೆಯಾಗಲಾರಂಭಿಸಿತು. ಎರಡು ವಾರದಿಂದ ನಲ್ಲಿಗಳಲ್ಲಿ ನೀರನ್ನೇ ಕಂಡಿಲ್ಲ. ಮೂರ್ನಾಲ್ಕು ದಿನಗಳಿಂದ ನಗರಸಭೆಯಿಂದ ಟ್ಯಾಂಕರ್
ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಜನರ ಬೇಡಿಕೆಯಷ್ಟು ನೀರು ಸಿಗುತ್ತಿಲ್ಲ ಎಂದು ಬೈತಕೋಲದ ರಾಮ ತಾಂಡೇಲ್ ಆತಂಕ ವ್ಯಕ್ತಪಡಿಸಿದರು.

ಬೈತಕೋಲ ಭಾಗದಲ್ಲಿರುವ ಜಲಮೂಲಗಳು ಬತ್ತಿವೆ. ಹಣ ನೀಡಿ ನೀರು ಖರೀದಿಸುವ ಸ್ಥಿತಿ ಇದೆ. ನಾಲ್ಕು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಪ್ರತಿ ಟ್ರಿಪ್‍ಗೆ ರೂ. 2 ರಿಂದ 3 ಸಾವಿದ ವರೆಗೂ ದರ ನಿಗದಿಯಾಗಿದೆ. ಆರ್ಥಿಕವಾಗಿ ದುರ್ಬಲರಾದವರು ನೀರು ಖರೀದಿಸಲು ಕಷ್ಟಪಡಬೇಕಾಗಿದೆ . ಮದುವೆ ಮುಂತಾದ ಕಾರ್ಯಕ್ರಮ ಇದ್ದರೆ ಕಷ್ಟ ಹೇಳತೀರದ್ದು ಎಂದರು.

ಗಂಗಾವಳಿ ನದಿಯಿಂದ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಜನರಿಂದ ಬಂದ ಬೇಡಿಕೆಗೆ ಅನುಗುಣವಾಗಿ ಅವರ ಮನೆ ಬಾಗಿಲಿಗೆ ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ನಗರಸಭೆಯ ನೀರು ಪೂರೈಕೆ ವಿಭಾಗದ ಎಂಜಿನಿಯರ್ ವೀಣಾ ಬಾಂದೇಕರ ಹೇಳಿದರು.

ಗಂಗಾವಳಿ ನದಿ ಪಾತ್ರದ ಪ್ರದೇಶದಲ್ಲಿ ಕನಿಷ್ಠ ಮೂರು ದಿನ ಮಳೆ ಬಿದ್ದರೆ ಸಮಸ್ಯೆ ಪರಿಹಾರವಾಗಬಹುದು. ನಿಯೋಜಿತ ಸ್ಥಳದಲ್ಲಿ ಕಿಂಡಿ‌ ಅಣೆಕಟ್ಟು ನಿರ್ಮಿಸದೆ ನೀರಿನ ಸಮಸ್ಯೆಗೆ ಪರಿಹಾರ ಇಲ್ಲವಾಗಿದೆ ಎಂದು ನೀರು ಸರಬರಾಜು ಮಂಡಳಿ ಎಂಜಿನಿಯರ್
ಶಿವರಾಮ ನಾಯ್ಕ ಹೇಳಿದರು.
…….

Latest Indian news

Popular Stories