ಕುಡಿಯುವ ನೀರು-ನೈರ್ಮಲ್ಯಕ್ಕೆ ಪ್ರಥಮ ಪ್ರಾಶಸ್ತ್ಯ; ಸಿಇಓ ಕಾಂದೂ

ಕಾರವಾರ :  ಮಳೆಗಾಲ ಆರಂಭವಾಗುವ ಮೊದಲೇ ಜಿಲ್ಲೆಯಲ್ಲಿ ಇರುವ ಎಲ್ಲ ಕುಡಿಯುವ ನೀರಿನ ಮೇಲ್ತೊಟ್ಟಿಗಳನ್ನು (ಒವರ್ ಹೆಡ್ ವಾಟರ್ ಟ್ಯಾಂಕ್) ಕಡ್ಡಾಯವಾಗಿ ಶುಚಿಗೊಳಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಹೇಳಿದರು. 

ಅವರು ಇಂದು ನಗರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜೆಜೆಎಮ್, ಮನರೇಗಾ, ಆರ್ಥಿಕ ಶಾಖೆ, ಎಸ್‌ಬಿಎಮ್, ವಸತಿ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ವಿವಿಧ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. 

ಒಂದು ವೇಳೆ ತೆರೆದ ತೊಟ್ಟಿಗಳಿದ್ದರೆ ನೀರು ಕಲುಷಿತಗೊಳ್ಳದಂತೆ ಭದ್ರ ಮುಚ್ಚಳ ವ್ಯವಸ್ಥೆಯಾಗಬೇಕು. ಪೈಪ್‌ಲೈನ್‌ನಲ್ಲಿ ನೀರು ಸೋರಿಕೆ ನಿಯಂತ್ರಿಸಬೇಕು. ಖಾಸಗಿ ಕುಡಿಯುವ ನೀರಿನ ಮೂಲಗಳನ್ನು ಒಳಗೊಂಡಂತೆ ಎಲ್ಲ ಮೂಲಗಳಲ್ಲಿ ನಿಯಮಿತವಾಗಿ ನೀರಿನ ಪರೀಕ್ಷೆ ಮಾಡಬೇಕು. ಆ ಮೂಲಕ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಬೇಕು ಎಂದರು.

ಮನರೇಗಾ ಯೋಜನೆಗೆ ಸಂಬಂಧಿಸಿದಂತೆ ಮಾನವ ದಿನಗಳ ಸೃಜನೆ, ವರ್ಕ್ ಕಂಪ್ಲೀಷನ್, ಮೊದಲ 5 ಆದ್ಯತೆಯ ಕಾರ್ಯಗಳು ಸೇರಿದಂತೆ ಎಲ್ಲ ವಿಭಾಗದಲ್ಲಿ ಮೇ ಅಂತ್ಯದೊಳಗಾಗಿ ನಿಗಧಿತ ಗುರಿ ಸಾಧಿಸಲು ಸೂಚಿಸಿದರು. 

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ ಕಟ್ಟಡ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು. ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವ ಮೂಲಕ ಸಮಗ್ರ ಪ್ರಗತಿ ಸಾಧಿಸಲು ಕಾರ್ಯಪ್ರವರ್ತರಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಯೋಜನಾ ನಿರ್ದೇಶಕ ಮಂಜುನಾಥ ನಾವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿಗಳು ಇದ್ದರು.

……

Latest Indian news

Popular Stories