ಹೋಳಿ ಹಬ್ಬಕ್ಕೆ ಒಂದೇ ದಿನ ಬಾಕಿ : ಹೆಚ್ಚಿದ ಸುಗ್ಗಿ ಕುಣಿತದ ಅಬ್ಬರ

ಕಾರವಾರ : ಹೋಳಿ ಹಬ್ಬಕ್ಕೆ ಒಂದೇ ದಿನ ಬಾಕಿ ಇರುವಾಗ ಕರಾವಳಿ ಭಾಗದಲ್ಲಿ ಸುಗ್ಗಿ ಕುಣಿತದ ಸಂಭ್ರಮ ಹೆಚ್ಚಿದೆ. ಅದರಲ್ಲಿಯೂ ಬಿಣಗಾ, ತೋಡೂರು, ಅವರ್ಡಾ ಹಾಲಕ್ಕಿ, ಕೋಮಾರಪಂತ ಸಮುದಾಯದ ಸುಗ್ಗಿ ಕುಣಿತ ಜಿಲ್ಲೆಯಲ್ಲಿ ಹೆಸರು ಪಡೆದಿದೆ.

ಕಾರವಾರದ ಗ್ರಾಮೀಣ, ನಗರ ಪ್ರದೇಶದ ಮನೆಗಳ ಎದುರು ನಿತ್ಯ ‘ಚೋಹೋಚೋ.. ಚೊಹೋಚೋ…’ ಎಂಬ ಹಾಡು , ಹೆಜ್ಜೆ ಕುಣಿತಕ್ಕೆ ಕಳೆ ಬಂದಿದೆ. ಬಿಸಲ ಬೇಗೆಯನ್ನು ಲೆಕ್ಕಿಸದೆ ಲಯಬದ್ಧ ಹಾಡು, ಅದಕ್ಕೆ ತಕ್ಕ ವಾದ್ಯದವ ಸದ್ದು ಕೇಳಿ ಬರುತ್ತಿದೆ. ಬಣ್ಣ ಬಣ್ಣದ ಬ್ಯಾಗಡಿ ಗರಿಗಳ ತುರಾಯಿ ತಲೆಗೆ ಕಟ್ಟಿಕೊಂಡು ಸುತ್ತುವ ಗುಂಪು ಸಾರ್ವಜನಿಕರ ಗಮನಸೆಳೆಯುತ್ತಿದೆ. ಸುಗ್ಗಿಯ ಹಿಗ್ಗು ಊರ ಬೀದಿಗಳಲ್ಲಿ ಕಳೆದ ಒಂದು ವಾರದಿಂದ ಮನೆ ಮನ ತುಂಬಿದೆ.

20 ಕ್ಕೂ ಹೆಚ್ಚು ಸುಗ್ಗಿಯ ಸಾಂಪ್ರದಾಯಿಕ ಹಾಡುಗಳು ಹಾಗೂ ಗುಮಟೆ ಪಾಂಗ್, ಜಾಗಟೆ ಸದ್ದಿಗೆ ಸುಗ್ಗಿ ಕುಣಿತ ಮಾಡುವ ಕಲಾವಿದರು ಕೋಲಾಟದ ಜೊತೆಗೆ ಹೆಜ್ಜೆ ಹಾಕಿದರೆ, ತಲೆಯ ಮೇಲಿರುವ ತುರಾಯಿ ಬೆರಗು ಗಮನಸೆಳೆಯುತ್ತಿದೆ.

ಹಾಲಕ್ಕಿ, ಪಡ್ತಿ, ಕೋಮಾರಪಂತ, ಗುನಗಿ, ಹಳ್ಳೇರ, ಮುಕ್ರಿ ಸಮುದಾಯದವರು ಸುಗ್ಗಿ ಕುಣಿತ ಆಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಅಂಕೋಲಾ ಭಾಗದಲ್ಲಿ ಬೆಳಂಬಾರ ಸುಗ್ಗಿ ಹೆಚ್ಚು ಪ್ರಸಿದ್ಧಿ ಪಡೆದಿದ್ದರೆ, ಅವರ್ಸಾ, ಹಟ್ಟಿಕೇರಿ ಭಾಗದ ಕೋಮಾರಪಂತ ಸಮುದಾಯದವರ ಸುಗ್ಗಿ ತಂಡವೂ ಹೆಸರು ಮಾಡಿದೆ. ಕಾರವಾರ ತಾಲ್ಲೂಕಿನ ಕದ್ರಾದ ಮಹಮ್ಮಾಯಾ ಹೀರಾಮೇಳ ಸುಗ್ಗಿ ತಂಡವು ಖಡ್ಗ ಬೀಸುತ್ತ ಆಡುವ ಕುಣಿತ ಅಪರೂಪವೆನಿಸಿದೆ. ಇಲ್ಲಿನ ಬೇಳೂರು, ಕಡವಾಡದ ಸುಗ್ಗಿ ತಂಡದವರೂ ವಿವಿಧೆಡೆ ಸುಗ್ಗಿ ಕುಣಿತದ ಪ್ರದರ್ಶನ ನೀಡಿದರು.

ಸುಗ್ಗಿ ವೇಷ ತೊಟ್ಟವರು ಕಾಲಿಗೆ ಚಪ್ಪಲಿ ಧರಿಸುವುದಿಲ್ಲ. ಸುಗ್ಗಿ ಮುಗಿದ ಬಳಿಕ ತುರಾಯಿಯನ್ನು ಗ್ರಾಮದ ಹೊರವಲಯದಲ್ಲಿರುವ ಕರಿದೇವರಿಗೆ ಅರ್ಪಿಸುವ ಪದ್ಧತಿ ಇದೆ. ಸುಗ್ಗಿ ವೇಷ ಹಾಕಿದರೆ ದೈವವು ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಇದೆ.

ಹೋಳಿ ಹಿನ್ನೆಲೆಯಲ್ಲಿ ಕಾರವಾರ ನಗರದಲ್ಲಿ ಈಗ ಕರಡಿಗಳ ಹಾಗೂ ವಿವಿಧ ವೇಷಧಾರಿಗಳ ತಿರುಗಾಟ ಹೆಚ್ಚಿದೆ . ಕರಡಿ, ಸಿಂಹ, ರಾಕ್ಷಸ ವೇಷ ಭೂಷಣ ಧರಿಸುವ ಯುವಕರು, ಮಕ್ಕಳು ನಗರದ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸವಾರರಿಂದ ಹಣ ಪಡೆಯುತ್ತಾರೆ. ಅಂಗಡಿ, ಮನೆಗಳಿಗೂ ತೆರಳಿ ದೇಣಿಗೆ ಸಂಗ್ರಹಿಸುವುದು ಮುಂದುವರಿದಿದೆ. ಹೋಳಿ‌ ಹಬ್ಬವೂ ಸೋಮವಾರ ಬಂದಿದ್ದು , ಸುಗ್ಗಿ ಕುಣಿತ ನಾಳೆ ಮುಕ್ತಾಯವಾಗಲಿದೆ.
…..

ಎಸ್‌ಎಸ್‌ಎಲ್‌ಸಿ ಪರೀಕ್ಷೆ ; ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಹೋಳಿ ಬಣ್ಣ ಎರಚುವುದು ನಿಷೇಧ

ಬಣ್ಣ, ಬಣ್ಣದ ನೀರು ಎರಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ

ಕಾರವಾರ : ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗಳು ಆರಂಭವಾಗುವ ದಿನ ಹೋಳಿ ಬಂದಿದ್ದು, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬಣ್ಣ ಎರಚ ಬೇಡಿ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ,ಬಣ್ಣ ಆಡುವ ಯುವ ಜನತೆಗೆ ಸೂಚನೆ ನೀಡಿದ್ದಾರೆ.

ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ಜಿಲ್ಲೆಯ 73 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಹಾಗೂ ಮಾರ್ಚ್ 25 ರಂದು ಜಿಲ್ಲೆಯಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ.
ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಹಚ್ಚುವುದು, ಬಣ್ಣದ ನೀರೆರುಚುವುದು ಹೋಳಿಯ ವಿಶೇಷತೆ. ಆದರೆ
ಪರೀಕ್ಷೆ ಬರೆಯಲು ಹೊರಟವರಿಗೆ ಮತ್ತು ಶಿಕ್ಷಕರಿಗೆ ಬಣ್ಣ ಎರಚಬೇಡಿ ಎಂದು
ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಈ ವರ್ಷ ಹೋಳಿ ಹಬ್ಬ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಒಂದೇ ದಿನ ಬಂದಿರುವುದರಿಂದ ಪರೀಕ್ಷೆಗೆ ಹಾಜರಾಗುತ್ತಿರುವ ಪರೀಕ್ಷಾರ್ಥಿ ಹಾಗೂ ಶಿಕ್ಷಕರು, ಮೇಲ್ವಿಚಾರಕರ ಮೇಲೆ ಬಣ್ಣ ಲೇಪಿಸುವುದರಿಂದ, ಪರೀಕ್ಷೆ ಬರೆಯಲು ಮಕ್ಕಳಿಗೆ ತೊಂದರೆಯಾಗುವ ಸಂಭವ ಹೆಚ್ಚಿರುತ್ತದೆ.

ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಠಿಯಿಂದ ಮಾರ್ಚ್ 25 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುವ ಮಕ್ಕಳು, ಪಾಲಕರು,ಪೋಷಕರು, ಶಿಕ್ಷಕರು ಮತ್ತು ಮೇಲ್ವಿಚಾರಕರ ಮೈ ಮೇಲೆ ರಾಸಾಯನಿಕ ದ್ರಾವಣದಿಂದ ಕೂಡಿದ ಬಣ್ಣ ಎರಚುವುದು,ವಿವಿಧ ಬಣ್ಣ, ಬಣ್ಣದ ನೀರು ಎರಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಒಂದು ವೇಳೆ ಇಂತಹ ಘಟನೆಗಳು ಜರುಗಿದ್ದಲ್ಲಿ ಅಂತವರ ಮೇಲೆ ಕಾನೂನು ರಿತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದ್ದಾರೆ.
ಪೊಲೀಸರು ಗಸ್ತಿನಲ್ಲಿದ್ದು ವಿದ್ಯಾರ್ಥಿಗಳಿಗೆ, ‌ಶಿಕ್ಷಕರಿಗೆ ರಕ್ಷಣೆ ನೀಡಲು ಸಹ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
…..

Latest Indian news

Popular Stories