ಶಾಸಕ ವಸಂತ್ ಆಸ್ನೋಟಿಕರ್ ಹತ್ಯೆ ಪ್ರಕರಣ : ಶಾರ್ಪ್‌ ಶೂಟರ್ ಸಂಜಯ್ ಮೊಹಿತೆಗೆ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

ಕಾರವಾರ : ಕಾರವಾರ ಶಾಸಕರಾಗಿದ್ದ ವಸಂತ್ ಆಸ್ನೋಟಿಕರ್ ಹತ್ಯೆ ಪ್ರಕರಣದ ಆರೋಪಿ ಶಾರ್ಪ್‌ ಶೂಟರ್ ಸಂಜಯ್ ಕಿಶನ್ ಮೊಹಿತೆಗೆ ಕಾರವಾರ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎ.15 ರಂದು ಎತ್ತಿಹಿಡಿದಿದೆ. ಪ್ರಕರಣದಲ್ಲಿ ಅಸ್ನೋಟಿಕರ್ ಹತ್ಯೆಯ ಶಾರ್ಪ ಶೂಟರ್ ಎಂಬ ಆರೋಪ ಹೊತ್ತಿದ್ದ ಮುಂಬೈ ಪಶ್ಚಿಮದ ಅಂಧೇರಿ ಮೂಲದ ಸಂಜಯ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್​.ಪಿ.ಸಂದೇಶ್ ಮತ್ತು ರಾಮಚಂದ್ರ ಹುದ್ದಾರ್ ಅವರಿದ್ದ ಧಾರವಾಠ ಪೀಠವು ಕಾರವಾರ ಹೆಚ್ಚುವರಿ ಸತ್ರ ಮತ್ತು ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪು ಎತ್ತಿ ಹಿಡಿದು ಆದೇಶ ನೀಡಿದೆ.

ಪೊಲೀಸರು ಕೋರ್ಟಗೆ ಸಲ್ಲಿಸಿದ ದಾಖಲೆಗಳ ಪರಿಶೀಲನೆ ಮತ್ತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಘಟನೆ ಸಂಬಂಧ ಲಭ್ಯವಿರುವ ಹಲವು ಪ್ರತ್ಯಕ್ಷ ಸಾಕ್ಷ್ಯಿಗಳಿದ್ದು, ಮೇಲ್ಮನವಿದಾರರ ಕೃತ್ಯವನ್ನು ಗುರುತಿಸಲಾಗಿದೆ. ವಿಚಾರಣಾ ನ್ಯಾಯಾಲಯಕ್ಕೆ ಸಾಕ್ಷ್ಯಗಳು ಹೇಳಿಕೆಗಳನ್ನು ನೀಡಿದ್ದಾರೆ. ಕೆಲವು ಸಾಕ್ಷ್ಯಾಧಾರಗಳಲ್ಲಿ ವಿರೋಧಾಭಾಸವಿರಬಹುದು. ಆದರೆ, ಕೃತ್ಯಕ್ಕೆ ಖಚಿತ ಆಧಾರಗಳಿವೆ. ಪ್ರತ್ಯಕ್ಷ ಸಾಕ್ಷಿಗಳು ಆರೋಪಕ್ಕೆ ಪೂರಕವಾಗಿದ್ದಾಗ ಇತರೆ ಸಾಕ್ಷಿಗಳನ್ನು ನಂಬಬೇಕಾಗುತ್ತದೆ ಎಂದು ಹೇಳಿದೆ.

2000 ಇಸ್ವಿ ಫೆ.19 ರಂದು ಶಾಸಕ ವಸಂತ ಅಸ್ನೋಟಿಕರ್ ಮೇಲೆ ನಡೆದ ಗುಂಡಿನ ದಾಳಿ ನಡೆದಿತ್ತು.

ಸಾಕ್ಷಿದಾರರು ಪಾಟಿಸವಾಲು ಸಂದರ್ಭದಲ್ಲಿ ನೀಡಿರುವ ಹೇಳಿಕೆ ನಂಬಲಾರ್ಹವಾಗಿವೆ. ಕಾನೂನಿನಲ್ಲಿ ಈ ಎಲ್ಲ ವಾಸ್ತವಿಕ ಅಂಶಗಳನ್ನು ಪರಿಶೀಲನೆ ನಡೆಸಿದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಕಾನೂನುಬಾಹಿರ ಹಾಗೂ ದೋಷದಿಂದ ಕೂಡಿದೆ ಎಂದು ಸಾಬೀತುಪಡಿಸುವುದಕ್ಕೆ ಯಾವುದೇ ಆಧಾರಗಳಿಲ್ಲ. ಆದ ಕಾರಣ ಸಂಜಯ್ ಮೊಹಿತೆ ಮೇಲ್ಮನವಿಯನ್ನು ವಜಾಗೊಳಿಸುತ್ತಿರುವುದಾಗಿ ಪೀಠ ಹೇಳಿತು.

ಪ್ರಕರಣದ ಹಿನ್ನೆಲೆ : ಕಾರವಾರದ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ಕೆ ಸಿದ್ದತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಶಾಸಕ ವಸಂತವ ಆಸ್ನೋಟಿಕರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಅವರನ್ನು ಮೊದಲು ಪಿಕಳೆ‌ ಆಸ್ಪತ್ರೆ, ನಂತರ ಕಾರವಾರ ಸಿವಿಲ್ ಆಸ್ಪತ್ರೆ ನಂತರ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದರು. ಘಟನೆಯಲ್ಲಿ ಗಣಪತಿ ಉಳ್ವೇಕರ್ ಎಂಬವರು ಗಾಯಗೊಂಡಿದ್ದರು.

ಪ್ರಕರಣದ ಮೊದಲ ಆರೋಪಿ ದಿಲೀಪ್ ಅರ್ಜುನ್ ನಾಯ್ಕ ಕಾರವಾರದಲ್ಲಿ ಮೃತಪಟ್ಟರೆ, ಮತ್ತಿಬ್ಬರು ಪ್ರಮುಖ ಆರೋಪಿಗಳಾದ ಆಂಟೋನಿ ಅಲಿಯಾಸ್ ಟೋನಿ ರೊಜಾರಿಯೋ ಮತ್ತು ಓಂ ಪ್ರಕಾಶ್ ಗಿರಿ ಎಂಬವರು ಉತ್ತರ ಪ್ರದೇಶದಲ್ಲಿ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದರು‌.
…‌‌….

Latest Indian news

Popular Stories