ನೇಹಾ ಹತ್ಯೆ ಪ್ರಕರಣ : ಫಾಸ್ಟ್ ಟ್ರಾಕ್ ಕೋರ್ಟ್ನಲ್ಲಿ ಶೀಘ್ರ ವಿಚಾರಣೆ ಆಗಬೇಕು – ನಿಂಬಾಳ್ಕರ್

ಕಾರವಾರ: ಹುಬ್ಬಳ್ಳಿಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೃತ್ಯವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.

ಈ ಸಂಬಂಧ ಅವರು ಶನಿವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹುಬ್ಬಳ್ಳಿ ಪೊಲೀಸರು ಕೊಲೆ ನಡೆದ ಒಂದೇ ಗಂಟೆಯೊಳಗೆ ಆರೋಪಿ ಫಯಾಜ್ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿ ಪೊಲೀಸರನ್ನು ನಾನು ಅಭಿನಂದಿಸುತ್ತೇನೆ. ಇಂಥ ಪ್ರಕರಣಗಳು ನಡೆದಾಗ ಫಾಸ್ಟ್ ಟ್ರಾಕ್ ಕೋರ್ಟ್ ಗಳಲ್ಲಿ ಆದಷ್ಟು ಶೀಘ್ರ ವಿಚಾರಣೆ ನಡೆಯುವಂತೆ ಮಾಡಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು ಎಂದು ಅವರು ಹೇಳಿದ್ದಾರೆ.

ಮತ್ತು ಮೃತ ಯುವತಿಯ ಕುಟುಂಬಕ್ಕೆ ಈ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ.

ನೇಹಾಳ ಮನೆಯವರಿಗೆ ಆಗಿರುವ ನೋವು ಮತ್ಯಾವ ತಂದೆ ತಾಯಿಗೂ ಬರಬಾರದು. ನೇಹಾ ನಮ್ಮ ಮನೆ ಮಗಳು. ಕೊಲೆಯಾಗಿರುವ ನೇಹಾಳಿಗೆ ನ್ಯಾಯ ಸಿಗಲೇಬೇಕು. ಹಾಗೆ ಕೊಲೆಗಾರನಿಗೆ ಕಾನೂನಿನ ಪ್ರಕಾರವೇ ಆದಷ್ಟು ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕು ಎಂದಿರುವ ನಿಂಬಾಳ್ಕರ್

ಕೊಲೆಗಡುಕ ಫಯಾಜ್ ನಂಥ ಕ್ರಿಮಿಗಳು ಎಲ್ಲ ಜಾತಿ ಧರ್ಮದಲ್ಲೂ ಇದ್ದಾರೆ. ಹೀಗಾಗಿ ಇದಕ್ಕೆ ಧರ್ಮ, ಜಾತಿಯ ಲೇಪನ ಹಚ್ಚಿ ಸಮಾಜದಲ್ಲಿ ಸಂಘರ್ಷದ ವಾತಾವರಣ ನಿರ್ಮಿಸುವುದು ಸರಿಯಲ್ಲ. ಇಂಥ ಕೊಲೆಗಳನ್ನು ಧರ್ಮದ ನೆಲೆಯಲ್ಲಿ ಇಟ್ಟು ಪರಸ್ಪರ ದ್ವೇಷ, ಪ್ರತೀಕಾರದ ಭಾವ ಮೂಡಿಸುವುದು ಕೂಡ ಅಪರಾಧವೇ ಆಗುತ್ತದೆ ಎಂದಿದ್ದಾರೆ.

ಇಂಥ ಕೊಲೆಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುವುದು ಕೂಡ ಹೇಯತನ. ಇಂಥವರಿಗೆ ಆದ ಘಟನೆಯ ನೋವಿಗಿಂತ ಹೆಚ್ಚಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥವೇ ಹೆಚ್ಚಾಗಿರುತ್ತದೆ. ಇಂಥವರ ಬಗ್ಗೆ ಕೂಡ ಸಮಾಜ ಎಚ್ಚರ ವಹಿಸಬೇಕು ಎಂದು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಂಜಲಿ ಅಭಿಪ್ರಾಯಪಟ್ಟಿದ್ದಾರೆ.

Latest Indian news

Popular Stories