ಕಾರವಾರ : ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಗಂಗಾವಳಿ ನದಿಯಲ್ಲಿ ಮುಳುಗಡೆಯಾಗಿದ್ದ ಕೇರಳ ಮೂಲದ ಭಾರತ್ ಬೇಂಜ್ ಲಾರಿಯ ವೀಲ್ ಜಾಕ್ 28 ದಿನಗಳ ಬಳಿಕ ಈಶ್ವರ ಮಲ್ಪೆ ಅವರು ನಡೆಸಿದ ಶೋಧ ಕಾರ್ಯದಲ್ಲಿ ಪತ್ತೆಯಾಗಿದೆ.
ಜಿಲ್ಲಾಡಳಿತದ ಅನುಮತಿ ಇಲ್ಲದೇ ನದಿ ನೀರಲ್ಲಿ ನಡೆದ ಹುಡುಕಾಟದ ಕಾರ್ಯಾಚರಣೆಗೆ ಶಾಸಕ ಸತೀಶ್ ಸೈಲ್ ಬೆಂಬಲ ನೀಡಿದ್ದರು. ಕೇರಳದ ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಹಾಗೂ ಅರ್ಜುನ್ ಸಂಬಂಧಿ ನಿತಿನ್ ಸ್ಥಳದಲ್ಲಿದ್ದರು.
ಶಿರೂರು ಗುಡ್ಡಕುಸಿತದಲ್ಲಿ ನಾಪತ್ತೆಯಾಗಿರುವ ಮೂವರು ಹಾಗೂ ಮುಳುಗಡೆಯಾಗಿರುವ ಕೇರಳದ ಮೂಲದ ಭಾರತ್ ಬೇಂಜ್ ಲಾರಿಗಾಗಿ ಶೋಧ ಪತ್ತೆಗಾಗಿ ಮಂಗಳವಾರ ಸಂಜೆ ಈಶ್ವರ ಮಲ್ಪೆ ಅವರು ನಡೆಸಿದ ಕಾರ್ಯಚರಣೆ ವೇಳೆ ಭಾರತ್ ಬೇಂಜ್ ಲಾರಿಯ ವೀಲ್ ಜಾಕ್ ಪತ್ತೆಯಾಗಿದೆ. ಈ ವೀಲ್ ಜಾಕ್ ತನ್ನ ಲಾರಿಯದ್ದೆ ಎಂದು ಲಾರಿ ಮಾಲೀಕ ಹೇಳಿದ್ದಾರೆ.
ಈಶ್ವರ ಮಲ್ಪೆ ತಂಡ ಮಂಗಳವಾರ ಬೆಳಿಗ್ಗೆಯೇ ಸ್ಥಳಕ್ಕೆ ಆಗಮಿಸಿತ್ತು. ಆದರೆ ನದಿ ನೀರಿನ ವೇಗ ತಗ್ಗಿರದ ಕಾರಣ ಜಿಲ್ಲಾಡಳಿತದಿಂದ ಕಾರ್ಯಚರಣೆಗೆ ಅನುಮತಿ ಸಿಗಲಿಲ್ಲ. ಹಾಗಾಗಿ ಕಾರ್ಯಚರಣೆ ಈಶ್ವರ ಮಲ್ಪೆ ತಂಡದವರು ಇಳಿದಿರಲಿಲ್ಲ. ಬಳಿಕ ಸ್ಥಳೀಯ ಶಾಸಕ ಸತೀಶ ಸೈಲ್ ಮುಂದಾಳತ್ವದಲ್ಲಿ ಈಶ್ವರ ಮಲ್ಪೆ ಅವರನ್ನ ಗಂಗಾವಳಿ ನದಿಯಲ್ಲಿ ಕಾರ್ಯಚರಣೆಗೆ ಇಳಿಸಲಾಗಿತ್ತು. ಈ ವೇಳೆ ಶೋಧ ಕಾರ್ಯ ನಡೆಸಿದ ಈಶ್ವರ ಮಲ್ಪೆ ನದಿಯ ಆಳದಲ್ಲಿ ಮಣ್ಣಿನ ಅಡಿಯಲ್ಲಿದ್ದ ಲಾರಿಯ ವೀಲ್ ಜಾಕ್ ಹೊರತಂದರು. ಮಣ್ಣು ಕುಸಿತದ ಘಟನೆಯಲ್ಲಿ ಲಾರಿ ನದಿಗೆ ಬಿದ್ದ ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ಹೆಚ್ಚಾಗಿದೆ.
…