ನನಗೆ ರಾಜಕಾರಣ ಬರಲ್ಲ ಎಂದ ಕಾಗೇರಿಗೆ ಜನರೇ ಪಾಠ ಕಲಿಸುತ್ತಾರೆ: ಡಾ.ಅಂಜಲಿ ತಿರುಗೇಟು

ಬನವಾಸಿ : ಅಂಜಲಿಗೆ ರಾಜಕಾರಣ ಬರಲ್ಲ ಎಂದಿರುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರಿಗೆ ಕ್ಷೇತ್ರದ ಜನರೇ ಮೇ 7ರಂದು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ತಿರುಗೇಟು ನೀಡಿದರು.

ಬನವಾಸಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಂಜಲಿ ರಾಜಕಾರಣದಲ್ಲಿ ಚಿಕ್ಕವಳು’ ಎಂದು ಕಾಗೇರಿ ಹೇಳುತ್ತಾರೆ. ಅವರು ಹಿರಿಯರು, ಅವರ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ರಾಜಕಾರಣದಲ್ಲಿ ನಾನು ಚಿಕ್ಕವಳೇ, ದೊಡ್ಡವಳಾಗಲು ಬಂದಿಲ್ಲ. ಸಮಾಜಸೇವೆಗಾಗಿ ನಾನು ಬಂದಿದ್ದೀನಿ‌. ಆದರೆ ಅವರು ಜನ ಸತ್ತರೂ ಪರವಾಗಿಲ್ಲ ರಾಜಕಾರಣ ಬಿಡಲ್ಲ ಎನ್ನುವವರು. ಬಡವರು ಬಡವರಾಗೇ‌ ಉಳಿಯಬೇಕು, ಸಾಲ ಮಾಡಿಕೊಂಡು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿ ಬಿಜೆಪಿಗರದ್ದು. ಆದರೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದೆ. ಆದರೆ ಬಿಜೆಪಿಗರು ಅದರ ಮೇಲೂ ರಾಜಕಾರಣ ಮಾಡುತ್ತಾರೆ. ಹಸ್ತಕ್ಕೆ ಮತ ದೇಶಕ್ಕೆ ಹಿತ ಎನ್ನುವುದನ್ನ ಜನ ಅರಿಯಬೇಕು ಎಂದರು.

ಖಾನಾಪುರದಲ್ಲಿ ಮನೆ ಇದ್ದರೂ, ಕ್ಷೇತ್ರದ ಜನತೆಗಾಗಿ ಬನವಾಸಿಗೆ ನಾನು ಒಂದೇ ತಿಂಗಳಲ್ಲಿ ಎರಡು ಬಾರಿ ಬಂದು ಹೋಗಿದ್ದೇನೆ. ಹಳಿಯಾಳ ಶಾಸಕರಾದರೂ ಆರ್.ವಿ.ದೇಶಪಾಂಡೆಯವರು ಭೇಟಿ ನೀಡಿದ್ದಾರೆ, ಇಲ್ಲಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಆದರೆ ಪಕ್ಕದಲ್ಲೇ ಮನೆ ಇರುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರು ಎಷ್ಟು ಬಾರಿ ಬನವಾಸಿಗೆ ಬಂದಿದ್ದಾರೆ? ಆರು ಬಾರಿ ಶಾಸಕರು, ಸಚಿವರು, ಸ್ಪೀಕರ್ ಆಗಿ ಏನು ಕೆಲಸ ಮಾಡಿದ್ದಾರೆ? ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಬನವಾಸಿ ಭಾಗದಲ್ಲಿ ಅಭಿವೃದ್ಧಿ ಮಾಡಿರುವುದು ಕಾಂಗ್ರೆಸ್. ತಿಂದ ಅನ್ನಕ್ಕೆ ದ್ರೋಹ ಮಾಡಬಾರದು. ಅವರಿಗಾಗಿ ಕೆಲಸ ಮಾಡಬೇಕು. ಕಾಂಗ್ರೆಸ್‌ಗೆ ದೇಶದಲ್ಲಿ ಪರ್ಯಾಯ ಪಕ್ಷವಿಲ್ಲ. ಹಿಂದುಳಿದ, ಬಡಜನರ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದರು.
ಮಾಜಿ ಶಾಸಕ ವಿ.ಎಸ್.ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ರವಿ ಕಲಕರಡಿ, ಸತೀಶ್ ನಾಯ್ಕ, ಸುಮಾ ಉಗ್ರಾಣಕರ್, ಸುಜಾತಾ ಗಾಂವ್ಕರ್, ಸಿ.ವಿ.ಗೌಡ, ನಾಗರಾಜ ನಾರ್ವೇಕರ್, ಶ್ರೀನಿವಾಸ್ ಧಾತ್ರಿ ಮುಂತಾದವರಿದ್ದರು.

“ಪರೇಶ್ ಮೇಸ್ತಾ ಸಾವನ್ನು ಕಾಂಗ್ರೆಸ್‌ನವರು ಮಾಡಿದ್ದೆಂದು ಸೃಷ್ಟಿ ಮಾಡಿ ಕರಾವಳಿಯಲ್ಲಿ ಕಿಚ್ಚು ಹಚ್ಚಿದ್ದು ಬಿಜೆಪಿ. ಶಾಂತ ಶಿರಸಿಯಲ್ಲೂ ಬೆಂಕಿ ಹಚ್ಚಿದ ಕೀರ್ತಿ ಬಿಜೆಪಿ ಅಭ್ಯರ್ಥಿಯದ್ದು. ಬೆಂಕಿ ಹಚ್ಚಿ ಪೊಲೀಸ್ ಬಸ್ ಹತ್ತಿ ಓಡಿಹೋಗಿದ್ದ ಇವರಿಂದ ಶಾಂತಿ ಬಯಸಲು ಸಾಧ್ಯವೇ?”

– ಭೀಮಣ್ಣ ನಾಯ್ಕ , ಶಾಸಕರು .ಶಿರಸಿ ಸಿದ್ದಾಪುರ ಕ್ಷೇತ್ರ

Latest Indian news

Popular Stories