ಕಾರವಾರ : ದಾಂಡೇಲಿ ನಗರದ ಬಸ್ ನಿಲ್ದಾಣದ ಮುಂಭಾಗದ ಜೆ.ಎನ್ ರಸ್ತೆಯಲ್ಲಿರುವ ಜಾಗದ ವಿಚಾರಕ್ಕೆ ಮಹಿಳೆ ಮತ್ತು ವ್ಯಕ್ತಿಯ ಮಧ್ಯೆ ಪರಸ್ಪರ ಜಗಳವಾಗಿ, ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸುಧಾ ಪ್ರದೀಪ ನಟೇಶ್ ಹಲ್ಲೆಗೊಳಗಾದ ಮಹಿಳೆಯಾಗಿದ್ದಾಳೆ.ಇಂದು ಬೆಳಿಗ್ಗೆ ಇವರು ತಮ್ಮ ಮನೆಯ ಹಿಂಬದಿಯಲ್ಲಿರುವ ಜಾಗದಲ್ಲಿ ಕಂಬ ಹಾಕುತ್ತಿರುವಾಗ ,ಅಲ್ಲಿಗೆ ಬಂದ ಪಕ್ಕದ ಲಾಡ್ಜ್ ನ ಮಾಲಕನಾದ ಅಸ್ಲಾಂ ನೀರಲಗಿ ಎಂಬಾತ ,ಯಾಕೆ ಕೆಲಸ ಮಾಡುತ್ತಿದ್ದಿ ಎಂದು ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಅವರ ಕೈಯನ್ನು ಹಿಡಿದು ಎಳೆದಾಡಿ, ಕುತ್ತಿಗೆಗೆ ಕೈ ಹಾಕಿ ಅವರು ಧರಿಸಿದ್ದ ಚೈನನ್ನು ಹಿಡಿದು ಜಗ್ಗಿ ಹರಿದು ಹಾಕಿದ್ದಾನೆ.
ಕೈಯಿಂದ ಎಡ ಭುಜಕ್ಕೆ ಹೊಡೆದು, ಎಳೆದಾಡಿ, ಧರಿಸಿದ್ದ ವೇಲನ್ನು ಹರಿದು, ಅವಮಾನ ಪಡಿಸಿದ್ದಾನೆ. ಹಾಗೂ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಹಲ್ಲೆಗೆ ತುತ್ತಾದ ಮಹಿಳೆ ಸುಧಾ ಪ್ರದೀಪ ನಟೇಶ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ನ್ಯಾಯಕ್ಕಾಗಿ ತಾನು ದೂರು ನೀಡಿದ್ದು, ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕುತ್ತಿದ್ದಾನೆ ಹಾಗೂ ಎಸ್ಸಿ- ಎಸ್ಟಿ ದೌರ್ಜನ್ಯ ಪ್ರಕರಣದಡಿ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಸುಧಾ ಅವರು ಪೊಲೀಸರಿಗೆ ವಿವರಿಸಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟಂತೆ ಮಾತನಾಡಿದ ಅಸ್ಲಾಂ ನೀರಲಗಿ , ತನಗೆ ಹಾಗೂ ತನ್ನ ಸಿಬ್ಬಂದಿಗೆ ಬೈದಿದ್ದಾರೆಂದು ಆರೋಪ ಮಾಡಿದ್ದಾರೆ.
ಈ ಘಟನೆ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
….