ಭೂ ಸುಧಾರಣೆ ಕಾಯ್ದೆಗೆ ಒಳಪಡುವ 40 ವರ್ಷ ಹಿಂದಿನ ಪ್ರಕರಣಗಳು: ಜಿಲ್ಲೆಯ ಭೂ ನ್ಯಾಯ ಮಂಡಳಿಯು ವಿಚಾರಣೆ ನಡೆಸದೇ ವಿಳಂಬ: ಎಸ್.ಎಂ.ಪಾಟೀಲ ಆರೋಪ

ಕಾರವಾರ : ಭೂ ಸುಧಾರಣೆ ಕಾಯ್ದೆಗೆ ಒಳಪಡುವ ನಲ್ವತ್ತು ವರ್ಷ ಹಿಂದಿನ ಪ್ರಕರಣಗಳನ್ನು ಜಿಲ್ಲೆಯ ಭೂ ನ್ಯಾಯ ಮಂಡಳಿಯು ವಿಚಾರಣೆ ನಡೆಸದೇ ಇರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರ ಸಂಘದ ಅಧ್ಯಕ್ಷ ಎಸ್.ಎಂ.ಪಾಟೀಲ ಆರೋಪಿಸಿದರು.

ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಭೂ ಸುಧಾರಣೆ ಕಾಯ್ದೆಗೆ ಒಳಪಡುವ 19 ಸಾವಿರ ಪ್ರಕರಣಗಳಿವೆ. ಈ ಪ್ರಕರಣ ಗಳನ್ನು ಇತ್ಯರ್ಥ ಮಾಡಲು ಜನಪ್ರತಿನಿಧಿಗಳು , ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ಪಾಟೀಲ ವಿಷಾಧಿಸಿದರು‌ ‌
19000 ಪ್ರಕರಣಗಳ ಪೈಕಿ ಕೆಲವು ಪ್ರಕರಣಗಳಿಗೆ ಉಚ್ಚ ನ್ಯಾಯಾಲಯದಿಂದ ನಿರ್ಣಯ ಬಂದಿದೆ. ಈ ಹಿಂದೆ ಶಿರಸಿ ಉಪ ವಿಭಾಗೀಯ ಅಧಿಕಾರಿಗಳಾಗಿದ್ದ ದೇವರಾಜ ನಾಯ್ಕ ಅವರ ಮೌಖಿಕ ಆದೇಶದಂತೆ ಉಚ್ಚ ನ್ಯಾಯಾಲಯದಲ್ಲಿದ್ದ ಅರ್ಜಿಗಳನ್ನು ಹಿಂಪಡೆದೆವು. ಆದರೆ ಆ ಅಧಿಕಾರಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದರು‌. ಆದರೂ ಜಿಲ್ಲಾ ಭೂ ನ್ಯಾಯ ಮಂಡಳಿಯು ಪ್ರಕರಣಕ್ಕಗಳಿಗೆ ಸಂಬಂಧಿಸಿದ ಸ್ಥಳ ಪರಿಶೀಲನೆ ನಡೆಸದೇ ಉಳಿಸಿಕೊಂಡಿದೆ ಎಂದು ಆರೋಪಿಸಿದರು.

ವಿಚಾರಣೆ ಕುರಿತು ಯಾವಾಗ ಕೇಳಿದರೂ ಗ್ರಾ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ, ವಿಧಾನಸಭೆ, ಲೋಕಸಭೆ ಚುನಾವಣೆಯ ಹೆಸರಿನಲ್ಲಿ ಮುಂದೂಡಲಾಗುತ್ತಿದೆ. ಇದಕ್ಕೆ ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿರುವ ಉಪ ವಿಭಾಗೀಯ ಅಧಿಕಾರಿ (ಸಹಾಯಕ ಕಮಿಷನರ್ )ಗಳೇ ಕಾರಣ ಎಂದರು.

ಪ್ರಕರಣಗಳನ್ನು ಈ ರೀತಿ ಮುಂದೂಡುತ್ತಿರುವುದುರಿಂದ ರೈತರಿಗೆ ನಷ್ಠವಾಗುತ್ತಿದೆ. ರೈತರ ಕಷ್ಟ ಕೇಳುವವರೇ ಇಲ್ಲವಾಗಿದೆ ಎಂದರು.

ಭೂ ಸುಧಾರಣಾ ಕಾಯ್ದೆಯ ಭೂಮಿಗಳು, ಸೊಪ್ಪಿನ ಬೆಟ್ಟದ ದಾರಿ ಸಮಸ್ಯೆ ಪ್ರಕರಣಗಳು, ಮುಗಿಯದೇ ರೈತರು ಜಮೀನಿನ ಮೇಲೆ ಸಾಲ ಪಡೆಯುವಂತಿಲ್ಲ. ಜತೆಗೆ ಭೂಮಿಯನ್ನು ಮಾರಾಟ ಮಾಡಲು ಕೂಡ ಆಗಿತ್ತಿಲ್ಲ ಎಂದರು. ಕೆಲ ಪ್ರಕರಣಗಳ ಕುರಿತಾಗಿ ತೀರ್ಪು ಬಂದು ಆರು ವರ್ಷ ಕಳೆದರೂ ಅವರ ಪಹಣಿ ಪತ್ರಿಕೆಯಲ್ಲಿ ಕರ್ನಾಟಕ ಸರಕಾರದ ಹೆಸರು ತೆಗೆದು ರೈತರ ಹೆಸರು ನಮೂದಿಸುವ ಕಾರ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಬಾಂದೇಕರ , ತಾಲೂಕು ಕಾರ್ಯದರ್ಶಿ ಬಿ.ಸಿ ನಾಯ್ಕ ಉಪಸ್ಥಿತರಿದ್ದರು.
…..

Latest Indian news

Popular Stories