ಕಾಂಗ್ರೆಸ್ ಪಕ್ಷ ಚುನಾವಣೆಗಾಗಿ ಧರ್ಮ ,ಬಣ್ಣ ಬಳಸಲ್ಲ : ಕಾಂಗ್ರೆಸ್ ಪಕ್ಷದ ವಕ್ತಾರ ಶಂಭು ಶೆಟ್ಟಿ

ಕಾರವಾರ : ಕಾಂಗ್ರೆಸ್ ಪಕ್ಷ ಚುನಾವಣೆಗಾಗಿ ಧರ್ಮ ,ಬಣ್ಣ ಬಳಸಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಹೇಳಿದರು.


ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಮಾಡಿದ ಅವರು ಧರ್ಮ ,ದೇವರು , ಬಣ್ಣ ಗಳನ್ನು ಮುಂದಿಟ್ಟು ಜನರ ಭಾವನೆ ಕೆರಳಿಸಿ ನಾವು ಮತ ಕೇಳಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಚುನಾವಣೆಗಾಗಿ ಧರ್ಮ ,ಬಣ್ಣ ಬಳಸಿಲ್ಲ. ಇದೇನಿದ್ದರೂ ಬಿಜೆಪಿ ಅವರ ಕೆಲಸ. ನಾವು ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತ ಕೇಳುತ್ತೇವೆ ಎಂದರು. ಕೇಸರಿ ಪೇಟ ಧರಿಸಿದ್ದಕ್ಕೆ ತಕರಾರು ಎತ್ತಿದ ಬಿಜೆಪಿಗರನ್ನು ಶಂಭು ಶೆಟ್ಟಿ ತರಾಟೆಗೆ ತೆಗೆದುಕೊಂಡರು. ಕೇಸರಿ ಬಣ್ಣ ರಾಷ್ಟ್ರ ಧ್ವಜದಲ್ಲಿದೆ. ಅದು ದೇಶದ ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದವರ ಸಂಕೇತ ಎಂದರು. ಕೇಸರಿ ಬಣ್ಣವನ್ನು ಬಿಜೆಪಿ ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ. ಅಭಿವೃದ್ಧಿ ಕೆಲಸ ಮಾಡದವರು ದೇವರು, ಧರ್ಮ, ಬಣ್ಣ ,ಭಾಷೆ‌ ಸುತ್ತ ಭಾವನೆ ಕೆರಳಿಸುತ್ತಾರೆ ಎಂದು ಕಾಂಗ್ರೆಸ್ ವಕ್ತಾರರು ಅಪಾದಿಸಿದರು‌ . ನಾವು ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಘೋಷಣೆ ಜಾರಿ ಮಾಡಿದ್ದೇವೆ. ಅದಕ್ಕಾಗಿ ಜನ‌ರು ನಮಗೆ 136 ಸ್ಥಾನ ಕೊಟ್ಟಿದ್ದಾರೆ. ಕೇಂದ್ರದ ಚುನಾವಣೆಗೆ ಸಹ ಹೊಸ ಗ್ಯಾರಂಟಿ ಘೋಷಿಸಿದ್ದೇವೆ ಎಂದರು.


ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ( 2023 ಜನವರಿ)ಅಧಿಕಾರದ ಕೊನೆಯ ದಿನಗಳಲ್ಲಿ 1000 ಕೋಟಿ ರೂ. ಕಾಮಗಾರಿ ಮಂಜೂರು ಮಾಡಿತು. ಆದರೆ ಸರ್ಕಾರದಲ್ಲಿ ಹಣ ಇರಲಿಲ್ಲ‌ . ಆದರೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗುತ್ತಿಗೆದಾರರಿಗೆ ತೊಂದರೆ ಆಗದಂತೆ ಹಂತ ಹಂತವಾಗಿ ಗುತ್ತಿಗೆ ಕಾಮಗಾರಿಗಳ ಹಣ ಬಿಡುಗಡೆ ಮಾಡುತ್ತಿದ್ದಾರೆ. ಗುತ್ತಿಗೆದಾರರ ಸಮಸ್ಯೆ ಬಗೆ ಹರಿಸುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕೆ ಇದೆ. ಇದೊಂದು ವ್ಯವಸ್ಥೆ ಎಂದರು. ಸರ್ಕಾರ ಬಂದಮೇಲೆ ಕೆಲಸಗಳಾಗುತ್ತಿಲ್ಲ ಎಂಬ ಬಿಜೆಪಿ ಅಪಾದನೆ ಅಲ್ಲಗಳೆದರು. ಹಿಂದಿನ ಶಾಸಕರು ಶಾಸಕರ ಅನುದಾನವನ್ನು ವಿವೇಚನಾ ನಿಧಿಯನ್ನು ಗುತ್ತಿಗೆದಾರರಿಗೆ ನೀಡದೆ , ಕೆಲಸ ಮಾಡಿಸಿಕೊಂಡರು. ಅಲ್ಲದೆ ಶಾಸಕರ ಅನುದಾನವನ್ನು ದೇವಸ್ಥಾನ ಅಭಿವೃದ್ಧಿಗೆ ಹಂಚಿ, ಗುತ್ತಿಗೆದಾರರನ್ನು ಕಷ್ಟಕ್ಕೆ ನೂಕಿದರು. ಇದು ಸಹ ಅವರ ಸೋಲಿಗೆ ಕಾರಣವಾಯಿತು ಎಂದರು‌. ಕಾಂಗ್ರೆಸ್ ಪಕ್ಷದ ಸರ್ಕಾರ ಐದು ಗ್ಯಾರಂಟಿ ಗಳನ್ನು ಮುಂದುವರಿಸುತ್ತೇವೆ. ಇನ್ನೂ 9 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳು ಮುಂದುವರುಲಿಯಲಿವೆ. ಬಿಜೆಪಿ ಅಪಪ್ರಚಾರಕ್ಕೆ ಜನ ಮತದಾನದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಬಿಜೆಪಿ ಜನರಿಗೆ ಮೋದಿ ಗ್ಯಾರಂಟಿ ಅನ್ನುತ್ತಾ ,ಯಾವುದೇ ಕಾರ್ಯಕ್ರಮ ನೀಡುತ್ತಿಲ್ಲ .ಪಕ್ಷದ ಹೆಸರನ್ನು ಸಹ ಬಿಜೆಪಿ ಹೇಳುತ್ತಿಲ್ಲ. ಇದು ಬಿಜೆಪಿ ಅಧಃಪತನ ಎಂದರು. ಆದರೆ ಕಾಂಗ್ರೆಸ್ ಕಾರ್ಯಕ್ರಮ ನೀಡಿ ಅದು ಪಕ್ಷದ ಗ್ಯಾರಂಟಿ ಅನ್ನುತ್ತಿದೆ. ವ್ಯಕ್ತಿ ಪೂಜೆಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿಲ್ಲ. ಕಾರ್ಯಕ್ರಮದಲ್ಲಿ ನಂಬಿಕೆ ಇಟ್ಟಿದೆ ಎಂದರು. ಗ್ಯಾರಂಟಿ ಯೋಜನೆಯನ್ನು ಶೇ.97 ರಷ್ಟು ತೆಗೆದುಕೊಂಡವರು ಉಡುಪಿಯವರು. ಉಡುಪಿಯಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಗ್ಯಾರಂಟಿ ವಿರೋಧಿಸಿದವರೇ ಅದರ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದರು.

ಹಾಗಾಗಿ ಕಾಂಗ್ರೆಸ್ ಎಲ್ಲ ಜನರಿಗೂ ಗ್ಯಾರಂಟಿ ನೀಡಿದೆ. ಅಲ್ಲಿ ಪಕ್ಷ ಜಾತಿ, ಧರ್ಮ, ವರ್ಗಗಳನ್ನು ನೋಡಿ ಗ್ಯಾರಂಟಿ ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಹೇಳಿದರು.

ಎಂಇಎಸ್ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ, ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ಪಷ್ಟವಾಗಿ ಕನ್ನಡ ನೆಲ ಜಲದ ಪರ ಇದ್ದಾರೆ. ಗಡಿ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮ. ಸುಪ್ರೀಂಕೋರ್ಟ್ ತೀರ್ಪು ಬರಬೇಕಿದೆ. ಕರ್ನಾಟಕದ ವಾದವನ್ನು ವಕೀಲರು ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅಂಜಲಿ ಹೊರಗಿನವರು ಎಂಬ ಬಿಜೆಪಿ ಅಪಪ್ರಚಾರಕ್ಕೆ ಉತ್ತರಿಸಿದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಸದಸ್ಯ ಜಿ.ಪಿ.ನಾಯಕ ,ಶಿರಸಿಯ ಕಾಗೇರಿ ಗ್ರಾಮದವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಅಂಕೋಲಾ ಕ್ಷೇತ್ರ ದಿಂದ ಮೂರು ಸಲ ಶಾಸಕರಾಗಿದ್ದರು. ಆಗ ಅವರು ವಲಸೆ ಬಂದಂತೆ ಬಿಜೆಪಿಗರಿಗೆ ಕಾಣಲಿಲ್ಲವೇ? , ಸಂವಿಧಾನ ಈ ದೇಶದ ಪ್ರಜೆ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲುವ ಅಧಿಕಾರ ನೀಡಿದೆ . ಗುಜರಾತ್ ಮೂಲದ ಪ್ರಧಾನಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲವೇ ಎಂದು ಮರುಪ್ರಶ್ನೆ ಎಸೆದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಕಿ ಗುಡಿನ್ಹೋ, ಪುರುಷೋತ್ತಮ ಗೌಡ, ರಾಣೆ,ಮುಂತಾದವರು ಉಪಸ್ಥಿತರಿದ್ದರು.
….

Latest Indian news

Popular Stories