
ಉತ್ತರ ಕನ್ನಡ | ಜನತಾ ದರ್ಶನ ಫಲಶೃತಿ : ಬಜಾರಕುಣಂಗ ಗ್ರಾಮಕ್ಕ ಬರಲಿದೆ ನ್ಯಾಯಬೆಲೆ ಅಂಗಡಿ
ಕಾರವಾರ : ಜೊಯಿಡಾ ತಾಲೂಕಿನ ಬಾಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ದೂದಮಾಳ ಗ್ರಾಮದ ಗೌಳಾದೇವಿ ದೇವಸ್ಥಾನದಲ್ಲಿ 19 ಡಿಸೆಂಬರ್ 2023 ರಂದು ನಡೆದ ಜಿಲ್ಲಾಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿ ದೂದಮಾಳ, ಸಿಸ್ಕೊ, ಕರಂಜೆ, ಕಡ್ಡೆ, ಡಿಗ್ಗಿ, ಮಾಯರೆ, ಸುಳಾವಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸಮೀಪದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ , ಸುಮಾರು 30 ಕಿ.ಮೀ ದೂರದ ತೆರಾಳಿ ಗ್ರಾಮಕ್ಕೆ ಹೋಗಿ ಪಡಿತರ ತೆಗೆದುಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ಕುರಿತಂತೆ ಬಜಾರ ಕುಣಂಗ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಪ್ರಕಟಣೆ ಹೊರಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅದರಂತೆ ತಹಶೀಲ್ದಾರ್ ಜೋಯಿಡಾ ರವರಿಂದ ವರದಿ ಪಡೆದುಕೊಂಡು ಜೋಯಿಡಾ ತಾಲೂಕಿನ ದೂದಮಾಳ (ಸಕಲವಾಡ) ಗ್ರಾಮದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಶನಿವಾರ ಪ್ರಕಟಣೆ ಹೊರಡಿಸಲಾಗಿದೆ.
ಈ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಸಕ್ತರು ಫೆಬ್ರವರಿ 5 ರ ಸಂಜೆ 5.30 ರ ಗಂಟೆ ಒಳಗಾಗಿ ನಿಗದಿಪಡಿಸಿದ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ ಜೋಯಿಡಾ ಕಚೇರಿ ಆಹಾರ ಶಾಖೆಯನ್ನು ಸಂಪರ್ಕಿಸಬಹುದಾಗಿರುತ್ತದೆ ಹಾಗೂ ಸದರಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಜನವರಿ 2024 ಮಾಹೆಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿಗೆ ತೆರೆಯುವವರೆಗೆ ತೆರಾಳಿ ನ್ಯಾಯಬೆಲೆ ಅಂಗಡಿಯವರು ದೂದಮಾಳ ಗ್ರಾಮದಲ್ಲಿ ಉಪಕೇಂದ್ರ ತೆರೆದು ಪಡಿತರ ವಿತರಣೆ ಮಾಡಲು ತಿಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ನಡೆಯುವ ಜನತಾದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಸಾರ್ವಜನಿಕರ ಅರ್ಜಿಗಳನ್ನು ಪ್ರಥಮಾದ್ಯತೆಯಲ್ಲಿ ಅತ್ಯಂತ ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ನಡೆದಿರುವ ಎಲ್ಲಾ ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ಸಲ್ಲಿಕೆಯಾದ ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ಬಾಕಿ ಇರುವ ಅರ್ಜಿಗಳ ಪ್ರಗತಿ ಕುರಿತಂತೆ ಜಿಲ್ಲಾಧಿಕಾರಿಗಳು ಪ್ರತಿ ದಿನ ಪರಿಶೀಲನೆ ನಡೆಸುತ್ತಿದ್ದಾರೆ.
ಬಜಾರಕುಣಂಗದಲ್ಲಿ ನಡೆದ ಜನತಾದರ್ಶನದಲ್ಲಿ ಭಾಗವಹಿಸಲು ತೆರಳುವಾಗ ಅಲ್ಲಿನ ದಟ್ಟ ಅರಣ್ಯ ಮತ್ತು ಸಂಚಾರ ವ್ಯವಸ್ಥೆಗೆ ಗ್ರಾಮಸ್ಥರು ಪಡುವ ಸಂಕಷ್ಟಗಳನ್ನು ಖುದ್ದು ಕಂಡಿದ್ದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ವಿಶೇಷ ಮುತುವರ್ಜಿ ವಹಿಸಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆದೇಶಿಸುವ ಮೂಲಕ ಗ್ರಾಮಸ್ಥರ ಮೊಗದಲ್ಲಿ ನೆಮ್ಮದಿ ಮತ್ತು ಸಂತಸ ಮೂಡಿಸಿದ್ದಾರೆ.
…..




