ಉತ್ತರ ಕನ್ನಡ ಲೋಕಸಭಾ ಯಾರಿಗೆ ? : ಚರ್ಚೆ ಆರಂಭ

ಉತ್ತರ ಕನ್ನಡ ಪ್ರತಿನಿಧಿ

ಕಾರವಾರ : ಕಳೆದ ಸಲ 2019ಕ್ಕಿಂತ ಮತದಾನ ಹೆಚ್ಚಾಗಿದೆ . ಇದು ಯಾರಿಗೆ ಲಾಭ ಎಂಬ ಚರ್ಚೆ ಪ್ರಾರಂಭವಾಗಿದೆ.
ಕಳೆದ ಲೋಕಸಭಾ ಚುನಾವಣಾ 2019 ರಲ್ಲಿ ಶೇ. 74.16 ರಷ್ಟು ಮತದಾನವಾಗಿತ್ತು‌. ನೋಟಾಕ್ಕೆ 16000 ಮತ ಬಿದ್ದಿದ್ದವು.
ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ 7,86,042 ಮತಗಳಿಸಿ ಗೆದ್ದಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ್ ಅಸ್ನೋಟಿಕರ್ 3, 06, 393 ಮತ ಗಳಿಸಿ ಎರಡನೇ ಸ್ಥಾನದಲ್ಲಿ ನಿಂತಿದ್ದರು. ಗೆಲುವಿನ ಅಂತರ 4, 79, 649 ಮತಗಳಾಗಿತ್ತು. ಆಗ 15,52,483 ಮತದಾರರು ಇದ್ದು, ಈ ಪೈಕಿ ಶೇ.74 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು.

ಈ ಸಲ 2024 ರಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ. ಕುಮಟಾದ ಎ.ವಿ. ಬಾಳಿಗಾ ಕಾಲೇಜಿನಲ್ಲಿ ಮತ ಯಂತ್ರಗಳನ್ನು ಸುಭದ್ರವಾಗಿ ಇಡಲಾಗಿದೆ. ಈ ಸಲ ಲೋಕಸಭೆಗೆ ಸ್ಪರ್ಧಿಸಿದ್ದ 13 ಜನ ಅಭ್ಯರ್ಥಿಗಳ‌ ಭವಿಷ್ಯ ಈಗ ಮತಯಂತ್ರಗಳಲ್ಲಿ ಅಡಗಿದೆ. ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಗಣಪತಿ ಹೆಗಡೆ ಮುಂಡಗೋಡ, ಹಳಿಯಾಳ,ದಾಂಡೇಲಿ, ಯಲ್ಲಾಪುರ, ಶಿರಸಿ, ಸಿದ್ದಾಪುರ ಭಾಗದಲ್ಲಿ ತಮ್ಮ‌ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಚಾರ ಸಹ ಮಾಡಿದ್ದರು. ಉಳಿದಂತೆ ಪಕ್ಷೇತರರು ಪ್ರಚಾರದಲ್ಲಿ ಸಹ ಕಣ್ಮರೆಯಾಗಿದ್ದರು.

ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಪ್ರಚಾರಕ್ಕೆ ಕರೆಸಿದ್ದರು. ಕ್ಷೇತ್ರದಲ್ಲಿ ತುಂಬಾ ಸಂಚರಿಸಿ ಪ್ರಚಾರ ಮಾಡಿದ್ದರು. ಸೋಶಿಯಲ್ ಮೀಡಿಯಾ ಬಳಸಿಕೊಂಡು ಕೆಲ ವಿವಾದಗಳನ್ನು ಸಹ ಸೃಷ್ಟಿಸಿಕೊಂಡಿದ್ದರು. ಅನಂತ ಕುಮಾರ್ ಹೆಗಡೆ ಪ್ರಚಾರಕ್ಕೆ ಬಾರದಿದ್ದರೂ, ಕೊನೆಯ ಭಾಗದಲ್ಲಿ ಬರ್ತಾರೆ ಅಂತ ಅವರ ಪಕ್ಷದ ನಾಯಕರು ಹೇಳುತ್ತಲೇ ಬಂದರು. ಆದರೆ ಕೊನೆಯ ತನಕ ಬಾರದ ಸಂಸದರ ವಿರುದ್ಧ ಭಿನ್ನಮತ ತೋರಿಸಿಕೊಳ್ಳಲಿಲ್ಲ. ಆದರೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ್ದರು. ಸತತವಾಗಿ ಕಾಂಗ್ರೆಸ್ ಮೇಲೆ ಪತ್ರಿಕಾಗೋಷ್ಠಿಗಳ ಮೂಲಕ ದಾಳಿಯನ್ನು ಪಕ್ಷದ ಮುಖಂಡರು ಮಾಡಿದರು.

ಇನ್ನು ಕಾಂಗ್ರೆಸ್ ಪಕ್ಷ ತನ್ನ ಕ್ಷೇತ್ರವನ್ನು 26 ವರ್ಷಗಳ ನಂತರ ಮರಳಿ ಪಡೆಯಲು ಉತ್ಸುಕವಾಗಿತ್ತು. ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಂಡಗೋಡ, ಕುಮಾಟಕ್ಕೆ ಕರೆಯಿಸಿ , ಜನರಲ್ಲಿ ಗ್ಯಾರಂಟಿ ಯೋಜನೆ ಪ್ರಯೋಜನ ಮನವರಿಕೆ ಮಾಡಲಾಯಿತು. ಬಿಜೆಪಿ ವಿರುದ್ಧ ವಾಗ್ದಾಳಿ ಕರಾರುವಕ್ಕಾಗಿ ಕಂಡು ಬಂತು. ಹಿರಿಯ ಕಾಂಗ್ರೆಸ್ ಧುರೀಣ‌,ಮಾಜಿ ಸಚಿವ ಆರ್.ವಿ.ದೇಶಪಾಂಡೆ,‌ ಸಚಿವ ಮಂಕಾಳು ವೈದ್ಯ, ಕಾಂಗ್ರೆಸ್ಸನ ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ಸಚಿವ ಮಂಕಾಳು ವೈದ್ಯ, ಕಿತ್ತೂರು ಶಾಸಕ ಹಾಗೂ ಐವನ್ ಡಿಸೋಜಾ, ಮಾಜಿ‌ ಸಚಿವ ರಮಾನಾಥ ರೈ, ವಿನಯ್‌ಕುಮಾರ್ ಸೊರಕೆ, ಮಾರ್ಗರೆಟ್ ಆಳ್ವಾರಂಥ ಘಟಾನುಘಟಿಗಳು ಅಂಜಲಿ‌ ನಿಂಬಾಳ್ಕರ್ ಪರ ಪ್ರಚಾರಕ್ಕೆ ಇಳಿದಿದ್ದರು.


ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 5 ರಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಯಲ್ಲಾಪುರ ಶಾಸಕರ ಪರೋಕ್ಷ ಬೆಂಬಲ, ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ತಟಸ್ಥರಾಗಿದ್ದು, ಬಿಜೆಪಿಗೆ ಒಳ ಏಟು ನೀಡಿರುವುದು , ರಾಜ್ಯ ಸರ್ಕಾರದ 5 ಗ್ಯಾರಂಟಿಗಳು ಕಾಂಗ್ರೆಸ್ ಕೈ ಹಿಡಿಯಬಹುದು ಎಂಬ ಲೆಕ್ಕಾಚಾರ ಇದೆ. ಕಾಂಗ್ರೆಸ್ ಅಭ್ಯರ್ಥಿ ಅಭಿವೃದ್ಧಿ ಬಗ್ಗೆ ಕೇಂದ್ರೀಕರಿಸಿ ಆಡಿದ ಮಾತು,‌ ಮಾಡಿದ ಪ್ರಚಾರ ಅವರ ನೆರವಿಗೆ ಬರಲಿವೆ ಎಂಬ ಮಾತು ಕ್ಷೇತ್ರದಲ್ಲಿ ಇದೆ.

ಇನ್ನು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಭವಿ ರಾಜಕಾರಣಿ‌ ‌. ಜಿಲ್ಲೆಯ ಎಲ್ಲಾ ಕಡೆ ಅವರ ಲಿಂಕ್ ಗಳಿದ್ದು, ಕಾರ್ಯಕರ್ತರ ಪ್ರಚಾರ ನಂಬಿದ್ದರು‌ .ಜನರ ಮುಂದೆ ‌ಕಾರ್ಯಕ್ರಮ ಇಡದೆ ಪ್ರಧಾನಿ ಮೋದಿ ಹೆಸರಲ್ಲಿ ಮತ‌ ಕೇಳಿದ್ದರು. ಆರ್. ಎಸ್. ಎಸ್ . ಸಿದ್ಧಾಂತಕ್ಕೆ ಬದ್ಧರಾದ ಕಾಗೇರಿಗೆ ಈ ಸಲ ಸಂಘ ಪರಿವಾರ ಅಷ್ಟಾಗಿ ಪ್ರಚಾರಕ್ಕೆ ನಿಂತಿರಲಿಲ್ಲ. ಅನಂತ ಕುಮಾರ್ ಹೆಗಡೆ ಬೆಂಬಲಿಗರು ತಟಸ್ಥರಾಗಿದ್ದುದು ಭಾರೀ ಹಿನ್ನೆಡೆ ತರಲಿದೆ ಎಂಬ ಚರ್ಚೆ ಶುರುವಾಗಿದೆ. ನಗರ ಪ್ರದೇಶದಲ್ಲಿ ಬಿಜೆಪಿ ಪ್ರಭಾವ ಇದ್ದರೂ,‌ಗ್ರಾಮೀಣ ಭಾಗ ಬಿಜೆಪಿಯ ಕೈ ಹಿಡಿದಿಲ್ಲ ಎಂಬ ಚರ್ಚೆ ಇದೆ. ಬಿಜೆಪಿಯ ಸಂಪ್ರದಾಯಿಕ ಮತಗಳನ್ನು‌ ನೆಚ್ಚಿ ಕೂತಿದೆ. ಕಾಗೇರಿ ರಾಜಕೀಯ ಭವಿಷ್ಯ ಬರೆಯುವ ಈ ಚುನಾವಣೆ ಫಲಿತಾಂಶಕ್ಕೆ ಜೂ.4 ರವರೆಗೆ ಕಾಯಬೇಕಿದೆ.

Latest Indian news

Popular Stories