ಉ.ಕ | ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ಹತ್ತು ಹಲವು ಕಾರ್ಯಕ್ರಮ

ಕಾರವಾರ : ಮೇ 7 ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಮಟ್ಟದ ಮತದಾರರ ಜಾಗೃತಿ ಸಮಿತಿ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಸಮಿತಿ ನಾನಾ ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಚಟುವಟಿಕೆಗಳು ನಡೆಯಲಾರಂಭಿಸಿವೆ.

ಸ್ವೀಪ್ ಸಮಿತಿಯಿಂದ ಜಿಲ್ಲೆಯ ಪ್ರತಿ ತಾಲ್ಲೂಕು ಹಂತದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಆಯಾ ತಾಲ್ಲೂಕಿನ ಜನರಲ್ಲಿ ಜಾಗೃತಿ ಮುಡಿಸಬಹುದಾದ ಪರಿಣಾಮಕಾರಿ ಚಟುವಟಿಕೆ ಹಮ್ಮಿಕೊಳ್ಳಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸುಗ್ಗಿ ಕುಣಿತ, ಯಕ್ಷಗಾನ, ಗೊಂಡ ನೃತ್ಯ, ಡಮಾಮಿ ನೃತ್ಯ, ಗೌಳಿಗರ ನೃತ್ಯ ಸೇರಿದಂತೆ ಜಿಲ್ಲೆಯ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಬಳಸಿಕೊಂಡು ಜನಜಾಗೃತಿಗೆ ಯೋಜನೆ ರೂಪಿಸಲಾಗಿದೆ.

ಜಿಲ್ಲೆಯಲ್ಲಿ 1,435 ಮತಗಟ್ಟೆಗಳಿದ್ದು 12,07,433 ಮತದಾರರಿದ್ದಾರೆ. 2019 ರಲ್ಲಿ ನಡೆದ ಕಳೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.74.16 ರಷ್ಟು ಮತದಾನ ನಡೆದಿತ್ತು. ಅದು ಈವರೆಗೆ ಜಿಲ್ಲೆಯಲ್ಲಿ ಲೋಕಸಭೆಗೆ ನಡೆದ ಚುನಾವಣೆಗೆ ನಡೆದ ಗರಿಷ್ಠ ಮತದಾನವಾಗಿತ್ತು. ಈ ಬಾರಿ ಹಿಂದಿನ ಚುನಾವಣೆಗಿಂತ ಮತದಾನ ಪ್ರಮಾಣ ಹೆಚ್ಚಿಸುವುದು ಸ್ವೀಪ್ ಸಮಿತಿಯ ಉದ್ದೇಶವಾಗಿದೆ.

ನಗರ ಪ್ರದೇಶದಲ್ಲಿಯೇ ಮತದಾನ ಪ್ರಮಾಣ ಕಡಿಮೆ ಆಗುತ್ತಿರುವುದು ಅಂಕಿ–ಅಂಶಗಳಿಂದ ದೃಢಪಡುತ್ತಿದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಕ್ರಿಕೆಟ್, ಬೈಕ್ ರೇಸ್ ಸೇರಿ ಹಲವು ಕ್ರೀಡಾ ಚಟುವಟಿಕೆಯನ್ನು ನಗರ ವ್ಯಾಪ್ತಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಪತ್ರಿಕೆಗೆ ವಿವರಿಸಿದರು.

‘ಹಿಂದಿನ ಲೋಕಸಭೆ, ವಿಧಾನಸಭೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ಮತದಾನ ಪ್ರಮಾಣದ ಮಾಹಿತಿ ಕಲೆಹಾಕಲಾಗಿದೆ. ಅತಿ ಕಡಿಮೆ ಮತದಾನ ನಡೆಯುತ್ತಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜನರನ್ನು ಮನವೊಲಿಸುವ ಮತದಾರ ಜಾಗೃತಿ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ನರೇಗಾ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಯಕ್ಷಗಾನ, ನಾಟಕದಂತಹ ಚಟುವಟಿಕೆ ಮೂಲಕ ಜನರಿಗೆ ಮತದಾನದ ಮಹತ್ವದ ಅರಿವು ಮೂಡಿಸಲಾಗುತ್ತದೆ’ ಎಂದೂ ತಿಳಿಸಿದರು.

ಪ್ರವಾಸಿ ತಾಣಗಳಲ್ಲಿಯೂ ಸ್ವೀಪ್ ಚಟುವಟಿಕೆ ನಡೆಯಲಿದೆ. ಅಂಗವಿಕಲರ ಬೈಕ್ ರ್‍ಯಾಲಿ, ಸಂತೆ, ಜಾತ್ರೆಗಳಲ್ಲಿ ಮತದಾರರ ಜಾಗೃತಿಗೆ ವಿಶೇಷ ಸಂದೇಶ, ಕಸ ಸಂಗ್ರಹಣೆ ವಾಹನಗಳ ಮೂಲಕ ಪ್ರಚಾರ ಸೇರಿದಂತೆ 25ಕ್ಕೂ ಹೆಚ್ಚು ಚಟುವಟಿಕೆಗಳ ಮೂಲಕ ಮತದಾರರ ಜಾಗೃತಿ ನಡೆಸಲು ನಿಶ್ಚಯಿಸಲಾಗಿದೆ ಎಂದರು.

–––––––––––––––

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ :

ವರ್ಷ- ಮತದಾನ ವಿವರ :
…..

2019 ರ ಚುನಾವಣೆಯಲ್ಲಿ
ಶೇ.74.16

2014 ರ ಚುನಾವಣೆಯಲ್ಲಿ
ಶೇ.69.04

2009 ರ ಚುನಾವಣೆಯಲ್ಲಿ
ಶೇ. 59.01

2004ರ ಚುನಾವಣೆಯಲ್ಲಿ
ಶೇ. 68.09

1999 ರ ಚುನಾವಣೆಯಲ್ಲಿ
ಶೇ. 70.30

1998 ರ ಚುನಾವಣೆಯಲ್ಲಿ
ಶೇ. 67.03

1996 ರ ಚುನಾವಣೆಯಲ್ಲಿ
ಶೇ.62.00

1991 ರ ಚುನಾವಣೆಯಲ್ಲಿ ಶೇ.51.40

“ಮತದಾರರಲ್ಲಿ ಮತದಾನದ ಮಹತ್ವ ಮತ್ತು ಅರಿವಿಗೆ ಗ್ರಾಮೀಣ ಮಟ್ಟದಲ್ಲಿ ಪ್ರಯತ್ನ ಆಗಿದೆ. ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಹಂತದಲ್ಲಿ ಐಕಾನ್‍ಗಳನ್ನು ನೇಮಿಸಲು ಸಿದ್ಧತೆ ನಡೆದಿದೆ. ಅವರ ಮೂಲಕ ಮತದಾನದ ಮಹತ್ವದ ಬಗ್ಗೆ ಪ್ರಚಾರ ಮಾಡಲಾಗುವುದು.”

– ಈಶ್ವರ ಕಾಂದೂ. ಸಿಇಒ ಹಾಗೂ
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು

Latest Indian news

Popular Stories