ಕಾಂಗ್ರೆಸ್ ಬೆಂಬಲಿಸಲು ಸಿಪಿಐ(ಎಂ) ನಿರ್ಧಾರ

ವಿಜಯಪುರ : ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವ ನಿಟ್ಟಿನಲ್ಲಿ ಸಿಪಿಐ (ಎಂ) ಪಕ್ಷ ನಿರ್ಧಾರ ಕೈಗೊಂಡಿತು. ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರ ಗೆಲುವಿಗೆ ಸಂಪೂರ್ಣವಾಗಿ ಶ್ರಮಿಸಲಾಗುವುದು ಎಂದು ಸಿಪಿಐ (ಎಂ) ಮುಖಂಡರು ಹೇಳಿದರು.
ನಗರದ ಎಪಿಎಂಸಿಯ ಆವರಣದಲ್ಲಿರುವ ಪ್ರಾಂತ ರೈತ ಸಂಘದ ಕಾರ್ಯಾಲಯದಲ್ಲಿ ನಡೆದ ಸಿಪಿಐ (ಎಂ) ಜಿಲ್ಲಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಿಪಿಐ ರಾಜ್ಯ ಕಾರ್ಯದರ್ಶಿ ನಾಗರಾಜ್ ಪಾಲಾಕ್ಷಯ್ಯ ಮಾತನಾಡಿ, ಕರ್ನಾಟಕವು ಈ ಬಾರಿ ಮಳೆ ಬಾರದೆ ಭೀಕರ ಬರಗಾಲಕ್ಕೆ ತುತ್ತಾಗಿದ್ದರೂ ಸಹ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬಿಡಿಗಾಸು ಸಹ ನೀಡದೇ ಸತಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಿಂದ ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆರಿಸಿ ಹೋಗಿದ್ದರೂ ಬರಗಾಲ ಪರಿಹಾರ ನಿಧಿಗಾಗಿ ದ್ವನಿ ಎತ್ತದಿರುವದು ನೋವಿನ ಸಂಗತಿ ಎಂದರು.

ಕಾರ್ಪೊರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲು ಇವರಲ್ಲಿ ಹಣವಿದೆ ಆದರೆ ಬರಗಾಲಕ್ಕೆ ಸಿಕ್ಕು ಒದ್ದಾಡುತ್ತಿರುವ ರೈತರ ಗೋಳು ಇವರ ಕಣ್ಣಿಗೆ ಕಾಣುತ್ತಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ ಮಾತನಾಡಿ, ಕೇಂದ್ರದಲ್ಲಿ ಕೋಮುವಾದಿಗಳು ಮತ್ತು ಕಾರ್ಪೋರೇಟ್ ಕಂಪನಿಗಳು ಒಂದಾಗಿ ದೇಶದ ಅಮೂಲ್ಯ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಚುನಾವಣಾ ಬಾಂಡ್ ಗಳ ಮುಖಾಂತರ ಭ್ರಷ್ಟಾಚಾರವನ್ನು ಕಾನೂನುಬದ್ದಗೊಳಿಸಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗುತ್ತಿದೆ ಇದನ್ನು ಮರೆಮಾಚಲು ದೇಶದಾದ್ಯಂತ ಕೋಮು ವಿಭಜಕ ನೀತಿಗಳನ್ನ ಹರಿಬಿಡಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿಯನ್ನು ಸೊಲಿಸುವದು ಅವಶ್ಯವಿದೆ ಎಂದರು.

ಹೋರಾಟಗಾರ್ತಿ ಸುರೇಖಾ ರಜಪೂತ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರೈತ ಮುಖಂಡ ಭೀಮಶಿ ಕಲಾದಗಿ, ನಿಂಗಪ್ಪ ಪೂಜಾರ, ಪಿಂಟು, ಸುನಂದಾ, ಅನಸುಯಾ ಹಜೆರಿ, ಪುಂಡಲಿಕ ಹಂದಿಗನೂರ, ಕಾಜೆಸಾಬ ಕೊಲಾರ, ರಮೇಶ್ ಟಿ.ಎಸ್ ಉಪಸ್ಥಿತರಿದ್ದರು.

Latest Indian news

Popular Stories