ವಿಜಯಪುರ : ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನಾ ಕಾರ್ಯ ದಿ.22 ರಂದು ನಡೆಯಲಿರುವುದರಿಂದ ಆ ದಿನದಂದು ನಿಗದಿಯಾದ ಎಲ್ಲ ರೀತಿಯ ಪರೀಕ್ಷೆಗಳನ್ನು ಮುಂದೂಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ವಿಜಯಪುರದ ಸಚೀನ್ ಕುಳಗೇರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಶತಮಾನಗಳ ಕನಸು ನನಸಾಗಿದೆ, ಎಷ್ಟೋ ಜನರ ತ್ಯಾಗ, ಬಲಿದಾನದ ಫಲವಾಗಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗುತ್ತಿದೆ, ಪ್ರತಿಯೊಬ್ಬರು ಈ ಪವಿತ್ರ ಕ್ಷಣಗಳನ್ನು ಕಾಣಲು ಉತ್ಸಾಹದಿಂದ ಕಾಯುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಪರೀಕ್ಷೆಗಳು ಇದ್ದರೆ ವಿದ್ಯಾರ್ಥಿಗಳು ಈ ಅಪೂರ್ವ ದೃಶ್ಯಗಳನ್ನು ಕಾಣಲು ವಂಚಿತರಾಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇಡೀ ದೇಶವೇ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕಾತರಗೊಂಡಿದೆ. ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನ, ಮಠ, ಗುಡಿಗಳು ಅಲಂಕೃತಗೊಂಡಿದೆ. ದೇಶದ ಜನ ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ವೀಕ್ಷಿಸಲು, ಶ್ರೀರಾಮ ಭಜನೆ, ಪೂಜೆಯಲ್ಲಿ ತಲ್ಲೀನರಾಗಲು ಬಯಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸಹ ಈ ಅಪೂರ್ವ ಕ್ಷಣಗಳನ್ನು ನೋಡಿ ಆನಂದಿಸಬೇಕು, ಹೀಗಾಗಿ ಅಂದು ನಿಗದಿಯಾಗಿರುವ ಎಲ್ಲ ಪರೀಕ್ಷೆಯನ್ನು ಮುಂದುಡುವುದರ ಮೂಲಕ ವಿದ್ಯಾರ್ಥಿಗಳು ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಂಭ್ರಮದಿಂದ ತಮ್ಮ ಊರುಗಳಲ್ಲಿ ದೇವಸ್ಥಾನಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.