ವಿಜಯಪುರ: ಸಿದ್ಧರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ ಅವರೆಲ್ಲರ ಟೀಕೆಗಳು ಸುಳ್ಳು ಎಂದು ನಾಡಗೌಡರು ತೋರಿಸಿಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 227 ಕೋಟಿ ರೂ. ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ಧರಾಮಯ್ಯ ಸರ್ಕಾರದಲ್ಲಿ ಹಣ ಇಲ್ಲ ಎನ್ನುವುದು ಸುಳ್ಳು, ನಮ್ಮ ಸರ್ಕಾರದಲ್ಲಿ ಹಣ ಇಲ್ಲದಿದ್ದರೆ 227 ಕೋಟಿ ರೂ. ಹಣ ಎಲ್ಲಿಂದ ಬಂತು. ಇದರ್ಥ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ, ಜನರಿಗೆ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದರು.
ಇನ್ನು ನಾವು ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ಆ ಗ್ಯಾರಂಟಿಗಳನ್ನು ನೀಡಿದ್ದರಿಂದ ನಮ್ಮಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲ ಎಂದು ಆರೋಪಿಸುತ್ತಾರೆ ಆದರೆ ಅವರ ಆರೋಪಗಳು ಸುಳ್ಳು ಎಂದು ಇಂದು ನಾಡಗೌಡರು ತೋರಿಸಿಕೊಟ್ಟಿದ್ದಾರೆ. ಅನೇಕ ಇಲಾಖೆಗಳಲ್ಲಿ ಹಣ ಇದೆ, ನಮ್ಮ ಹತ್ತಿರ ಬಂದು ಸರ್ಕಾರದ ಒಪ್ಪಿಗೆ ಪಡೆದು ಈ ಕೆಲಸವನ್ನು ನಾಡಗೌಡರ ಮಾಡುತ್ತಿದ್ದಾರೆ ಎಂದರು.
ನಾಡಗೌಡರು ಸಭ್ಯ ರಾಜಕಾರಣಿ, ಹಿರಿಯರು, ಮಂತ್ರಿ ಯೋಗ್ಯತೆ ಇದ್ದವರು ಆದರೆ ಶೇ. 15 ರಷ್ಟು ಮಾತ್ರ ಮಂತ್ರಿಗಳನ್ನು ಮಾಡಬೇಕಾಗಿರುವುದರಿಂದ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಪಕ್ಷ ಅವರನ್ನು ಗುರುತಿಸಿದೆ ಎಂದರು. ಇನ್ನು ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಗೆ ಬಂದಾಗ ನಾಡಗೌಡರನ್ನು ಗೆಲ್ಲಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕೆಲಸ ಮಾಡುತ್ತೇವೆ, ಬದಲಾವಣೆ ತರುತ್ತೇವೆಂದು ಹೇಳಿದ್ದೇವು ಅದರ ಭಾಗವಾಗಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಇನ್ನು ಚುನಾವಣಾ ಪೂರ್ವದಲ್ಲಿ ವಾಗ್ದಾನ ಮಾಡಿದಂತ ಗೃಹ ಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಕೊಟ್ಟು ನುಡಿದಂತೆ ನಡೆದಿದ್ದೇವೆ. ಇನ್ನು 2013-18ರ ವರೆಗೆ ಮುಖ್ಯಮಂತ್ರಿಯಾಗಿದ್ದಾಗ 165 ಭರಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.
142 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಜೂನ್ 11 ರಿಂದ ಇಂದಿನವರೆಗೆ ಸರ್ಕಾರಿ ಬಸ್ ಗಳಲ್ಲಿ ಸುಮಾರು 142 ಕೋಟಿ ಮಹಿಳೆಯರು ಓಡಾಡಿದ್ದಾರೆ. 1.61 ಕೋಟಿ ಗ್ರಾಹಕರಿಗೆ 200 ಯುನಿಟ್ ವರೆಗೆ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದರು.
ಇನ್ನು ಹಸಿವು ಮುಕ್ತ ರಾಜ್ಯವಾಗಿಸಲು ಹಿಂದೆ ನಮ್ಮ ಸರ್ಕಾರ ಇದ್ದಾಗ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು ಅದನ್ನೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 5 ಕೆಜಿ ಗೆ ಇಳಿಕೆ ಮಾಡಿತು ಈಗ ಮತ್ತೆ ನಮ್ಮ ಸರ್ಕಾರ ಬಂದಿದೆ ನಾವು 10 ಕೆಜಿ ಅಕ್ಕಿಯನ್ನು ನೀಡುತ್ತಿದ್ದೇವೆ ಎಂದರು.
ಈ ಎಲ್ಲ ಯೋಜನೆಗಳಿಗೆ ಈ ವರ್ಷ 38000 ಕೋಟಿ ರೂ. ಖರ್ಚಾಗಲಿದೆ. ಮುಂದಿನ ವರ್ಷ 2024-25ರಲ್ಲಿ 58000 ಕೋಟಿ ರೂ. ಹಣ ಈ ಯೋಜನೆಗಳಿಗೆ ಬಳಕೆ ಮಾಡುತ್ತೇವೆ ಎಂದರು. ಈ ಎಲ್ಲ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ವಿರೋಧ ಪಕ್ಷದವರು ಹೇಳಿದರು ಆದರೆ ರಾಜ್ಯ ದಿವಾಳಿಯಾಗಲಿಲ್ಲ. ಇಷ್ಟೆಲ್ಲ ಯೋಜನೆಗಳನ್ನು ನೀಡಿಯೂ ಸರ್ಕಾರದ ಆರ್ಥಿಕ ಸ್ಥಿತಿ ಸುಭದ್ರವಾಗುವಂತೆ ಮಾಡಿದ್ದೇವೆ ಎಂದರು.
ಬಡವರ ಕೈನಲ್ಲಿ ಹಣ ಇರಬೇಕು. ರಾಜಕೀಯ ಸ್ವಾತಂತ್ರ್ಯಕ್ಕಿಂತ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಬೇಕು. ನಮ್ಮ ಸರ್ಕಾರ ಶರಣರ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿದೆ. ಜನರ ಆಶೀರ್ವಾದ ಕೇಳುವ ನೈತಿಕತೆ ನಮಗಿದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದರು.
ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬರುತ್ತಾರೆ: ಸಿಎಂ ಸಿದ್ಧರಾಮಯ್ಯ
ವಿಜಯಪುರ: ಜನರ ವಿಶ್ವಾಸ, ನಂಬಿಕೆಗಳಿಸುವಲ್ಲಿ ವಿಫಲವಾದ ಬಿಜೆಪಿಗೆ ಆಪರೇಷನ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹಣಕೊಟ್ಟು ಶಾಸಕರನ್ನು ಕೊಂಡುಕೊಂಡು ಬಹುಮತ ಮಾಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಮುದ್ದೇಬಿಹಾಳದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ಸಿನಿಂದ ಹಲವಾರು ನಾಯಕರು ದುಂಬಾಲು ಬಿದ್ದಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆಯೂ ಎರಡು ಬಾರಿ ಹಾಗೇ ಮಾಡಿದ್ದಾರೆ. 2008ರಿಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇದ್ದಾಗಲೂ ಇದನ್ನೇ ಮಾಡಿದ್ದು. ಎಲ್ಲಾ ಕಡೆ ಕೊಂಡುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಕೊಂಡುಕೊಳ್ಳಲು ಜನ ಸಿಕ್ಕರೆ ಸರ್ಕಾರ ರಚನೆ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ ಜನರು ಬಿಜೆಪಿಗೆ ಜನ ಪೂರ್ಣ ಅಧಿಕಾರ ಕೊಟ್ಟೇ ಇಲ್ಲ. 2008, 2013, 2018 ರಲ್ಲಿ ಅವರು ಬಹುಮತದಿಂದ ಗೆದ್ದೇ ಇಲ್ಲ. ಕಾಂಗ್ರೆಸ್ ಪಕ್ಷ 2013ರಲ್ಲಿ ಗೆದ್ದಿದೆ. 2023ರಲ್ಲಿ 136 ಸ್ಥಾನಗಳನ್ನು ಪಡೆದು ಗೆದ್ದಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಹಾಗೂ ತೀರ್ಪಿನಂತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬರುತ್ತಾರೆ ಎಂದರು.
ಮಂಡ್ಯದಲ್ಲಿ ಹನುಮಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಮಂಡ್ಯದ ಪ್ರಕರಣದ ವಾಸ್ತವಾಂಶವೇ ಅವರಿಗೆ ತಿಳಿದಿಲ್ಲ. ಅಲ್ಲಿ ಕೇವಲ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸುವುದಾಗಿ ಕೆರಗೋಡು ಗ್ರಾಮಪಂಚಾಯ್ತಿಯಲ್ಲಿ ಅನುಮತಿ ಪಡೆದುಕೊಂಡು ಕೇಸರಿ ಧ್ವಜ ಹಾರಿಸಲು ಮುಂದಾಗಿದ್ದರು. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಯಾವುದೇ ಗೌರವವಿಲ್ಲ. ರಾಷ್ಟ್ರಧ್ವಜ, ಭಾರತ ದೇಶದ 140 ಕೋಟಿ ಜನರ ಅಸ್ಮಿತೆಯ ಪ್ರತೀಕ. ಇಂತಹ ರಾಷ್ಟ್ರಧ್ವಜವನ್ನು ಹಾಕಲು ಒಪ್ಪದಿರುವವರು ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ ಎಂದರು. ಕಾಂಗ್ರೆಸ್ ಪಕ್ಷ ರಾಷ್ಟ್ರಧ್ವಜಕ್ಕೆ ಸದಾ ಗೌರವ ನೀಡುತ್ತದೆ. 1935 ರಲ್ಲಿ ದೇಶಕ್ಕೆ ರಾಷ್ಟ್ರಧ್ವಜವನ್ನು ನೀಡಿದವರು ಕಾಂಗ್ರೆಸ್ ಪಕ್ಷ ಎಂದರು.