ವಿಜಯಪುರ : ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕಾಂಗ್ರೆಸ್ ಅಭ್ಯರ್ಥಿಯನ್ನು ದುರ್ಬೀನು ಹಾಕಿ ಹುಡುಕಬೇಕಾದ ಪರಿಸ್ಥಿತಿ ಇದ್ದರೆ, ಬಿಜೆಪಿ ಅಭ್ಯರ್ಥಿ ಮಹಾರಾಷ್ಟ್ರ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಅವರು ಪ್ರಚಾರ ಮಾಡುತ್ತಿದ್ದಾರೆ ಹೀಗಾಗಿ ಜನತೆ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡುವುದು ಗ್ಯಾರಂಟಿ ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳಿಗೆ ಹಳ್ಳಿಗಳ ಮಾಹಿತಿ ಇಲ್ಲ, ಕಾರ್ಯಕರ್ತರ ಪರಿಚಯವೂ ಇಲ್ಲ, ಮಹಾರಾಷ್ಟ್ರ ವ್ಯಾಪ್ತಿಯ ನಂದೂರ ಗ್ರಾಮಕ್ಕೆ ಹೋಗಿ ಬಿಜೆಪಿ ಅಭ್ಯರ್ಥಿ ಪ್ರಚಾರ ಮಾಡಿದ್ದಾರೆ, ನಮ್ಮ ಕ್ಷೇತ್ರದಲ್ಲಿ ಯಾವ ಗ್ರಾಮ, ಹಳ್ಳಿ ಬರುತ್ತದೆ ಎಂಬ ಅರಿವು ಬಿಜೆಪಿ ಅಭ್ಯರ್ಥಿಗೆ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷ ಈಗಾಗಲೇ ವಾರಂಟಿ ಮುಗಿದಿದೆ, ಹೀಗಾಗಿ ಅವರ ಗ್ಯಾರಂಟಿಗೆ ಯಾವ ಮಾನ್ಯತೆಯೂ ಇಲ್ಲ, ಕಾಂಗ್ರೆಸ್ ಅಭ್ಯರ್ಥಿಗೆ ಕಾರ್ಯಕರ್ತ ಬಲವೇ ಇಲ್ಲ ಎಂದರು.
ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ ಪ್ರಬಲವಾಗಿದೆ, 2013 ರ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ನಿಶ್ಚಿತ, ಜನಾಶೀರ್ವಾದವೇ ನನ್ನ ಜೊತೆ ಇದೆ ಎಂದರು.
ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ, ಜನತೆ ಒಲವು ಸಹ ಜೆಡಿಎಸ್ ಮೇಲಿದೆ, ಎಲ್ಲಕ್ಕಿಂತ ಹೆಚ್ಚಾಗಿ ನಾಗಠಾಣ ಕ್ಷೇತ್ರನಲ್ಲಿ ನನ್ನನ್ನು ಗೆಲ್ಲಿಸಿದರೆ ಮಂತ್ರಿ ಸ್ಥಾನ ನೀಡುವುದಾಗಿ ಕುಮಾರಣ್ಣ ನೀಡಿರುವ ಭರವಸೆಯಿಂದ ಜನತೆಯ ಉತ್ಸಾಹ ಇಮ್ಮಡಿಯಾಗಿದೆ ಎಂದರು.
ಜನಸೇವೆ ಮಾಡಿದ ಸಂತೃಪ್ತ ಭಾವ
ಕಳೆದ ಐದು ವರ್ಷಗಳ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಪ್ರಗತಿಗಾಗಿ, ಜನಸೇವೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ಮಹಾತ್ಮರ ಸಿದ್ಧಾಂತಗಳನ್ನು ಆಧರಿಸಿ ಕಾರ್ಯನಿರ್ವಹಿಸಿದ್ದೇನೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ವೇಗ ನೀಡಿದೆ. ಐತಿಹಾಸಿಕ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಬಜೆಟ್ ನಲ್ಲಿ ಅನುದಾನವನ್ನು ಸಮ್ಮಿಶ್ರ ಸರ್ಕಾರದಲ್ಲಿ ಮೀಸಲಿರಿಸಿದ ಪರಿಣಾಮ ಯೋಜನೆಗೆ ಚಾಲನೆ ದೊರಕಿದೆ ಎಂದರು.
ಉಮರಾಣಿ ಬಾಂದಾರ್ ನಿರ್ಮಾಣ, 110 ಕೆವಿ ಸಾಮರ್ಥ್ಯದ 9 ವಿದ್ಯುತ್ ವಿತರಣಾ ಕೇಂದ್ರ, ಶಾಲಾ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕೇಂದ್ರಗಳ ನಿರ್ಮಾಣ-ರಾಜ್ಯದಲ್ಲೇ ಅತಿ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಗೊಳಿಸಿದೆ ಹೆಮ್ಮೆ ಇದೆ, ಇದು ಸಾಧ್ಯವಾಗಿದ್ದು ಜನತೆಯ ಆಶೀರ್ವಾದ ಬಲದಿಂದ ಮಾತ್ರ ಎಂದರು.
ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿಯೂ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ, ಸೇವೆಯನ್ನು ಕರ್ತವ್ಯ ಎಂದು ಪರಿಭಾವಿಸಿ ಜನರ ಸೇವೆ ಮಾಡಿದ್ದೇನೆ, ಬಡ ರೋಗಿಗೆ ವೈಯಕ್ತಿಕ ನೆರವು ನೀಡುವ ಜೊತೆಗೆ ಅನೇಕ ಸಂದರ್ಭದಲ್ಲಿ ನಾನೇ ಖುದ್ದಾಗಿ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದೇನೆ, ಕೋವಿಡ್ ಲಾಕಡೌನ್ ಸಂದರ್ಭದಲ್ಲಿ ಮಹಾರಾಷ್ಟç, ಗೋವಾ ಮೊದಲಾದ ರಾಜ್ಯಗಳಲ್ಲಿ ಸಿಲುಕಿದ ಜನರಿಗೆ ನೆರವಾಗಿದ್ದೇನೆ, ಅವರನ್ನು ವಾಪಾಸ್ಸು ಕರೆ ತರುವಲ್ಲಿ ಸೇವೆ ಸಲ್ಲಿಸಿದ್ದೇನೆ, ಭೀಮಾ ಪ್ರವಾಹ ಸಂದರ್ಭದಲ್ಲಿ ಖುದ್ದಾಗಿ ಸಂತ್ರಸ್ತರ ಜೊತೆಗಿದ್ದು ಅವರಿಗೆ ನೆರವಾಗಿ ಅವರ ಸ್ಥಳಾಂತರಕ್ಕಾಗಿ ದುಡಿದಿರುವ ವಿಷಯ ಎಲ್ಲರಿಗೂ ಗೊತ್ತಿದೆ, ಮುಂದೆಯೂ ಸಹ ಇದೇ ರೀತಿಯ ಸೇವೆಯನ್ನು ಮಾಡುವ ಅವಕಾಶ ಕೊಡಿ ಎಂದು ಕೋರಿದರು.