ಕಾಂಗೋ: ಭೀಕರ ಮಳೆಯಿಂದ ಕಾಂಗೋದಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಿ 200 ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಕಾಂಗೋದಲ್ಲಿ ಮಳೆಯಾಗುತ್ತಿದೆ. ಮಳೆ ವಿಪರೀತವಾದ ಪರಿಣಾಮ ಪ್ರವಾಹ ಉಂಟಾಗಿದ್ದು, ಇದರಿಂದ ಭೂಕುಸಿತ ಉಂಟಾಗಿದೆ. ದಕ್ಷಿಣ ಕಿವು ಪ್ರಾಂತ್ಯದಲ್ಲಿ ಧಾರಾಕಾರ ಮಳೆಯಿಂದ ಗುರುವಾರ ನದಿಯೊಂದು ಉಕ್ಕಿ ಹರಿದ ಪರಿಣಾಮ ಪ್ರವಾಹ ಉಂಟಾಗಿದೆ. ಬುಶುಶು ಮತ್ತು ನ್ಯಾಮುಕುಬಿ ಗ್ರಾಮಗಳಲ್ಲಿ ಪ್ರವಾಹ ಹೆಚ್ಚಿನ ಹಾನಿ ಉಂಟು ಮಾಡಿದೆ. 200 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡು, ನೂರಾರು ಮಂದಿ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಇದುವರೆಗೆ 203 ಮಂದಿ ಮೃತದೇಹವನ್ನು ಮಣ್ಣು, ಕಟ್ಟಡಗಳ ಅಡಿಯಿಂದ ಹೊರ ತೆಗೆಯಲಾಗಿದ್ದು, ನಾಪತ್ತೆಯಾಗಿರುವ ಹಲವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
“ಜನರು ಬಯಲಿನಲ್ಲಿ ಮಲಗುತ್ತಿದ್ದಾರೆ. ಶಾಲೆಗಳು, ಆಸ್ಪತ್ರೆಗಳು ಸೇರಿ ಅನೇಕ ಮನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ” ಎಂದು ಸ್ಥಳೀಯ ಪಕ್ಷದ ಸದಸ್ಯ ಕಸೋಲೆ ಮಾರ್ಟಿನ್ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ರಾಜಧಾನಿ ಕಿನ್ಶಾಸಾದಲ್ಲಿ ಮಳೆಯಿಂದಾಗಿ ಕನಿಷ್ಠ 169 ಜನರು ಸಾವನ್ನಪ್ಪಿದ್ದರು.
ಪ್ರವಾಹದಲ್ಲಿ ಬದುಕುಳಿದವರಲ್ಲಿ ಒಬ್ಬರು ಮಾತನಾಡಿ, “ನಾನು ನನ್ನ ಎಲ್ಲಾ ಕುಟುಂಬವನ್ನು ಕಳೆದುಕೊಂಡಿದ್ದೇನೆ. ಇಡೀ ಗ್ರಾಮವು ಪಾಳುಭೂಮಿಯಾಗಿ ಮಾರ್ಪಟ್ಟಿದೆ, ಕಲ್ಲುಗಳು ಮಾತ್ರ ಉಳಿದಿವೆ. ನಮ್ಮ ಮನೆ ಎಲ್ಲಿತ್ತು ಎಂದು ಹೇಳಲೂ ಕೂಡ ನನಗೆ ಸಾಧ್ಯವಿಲ್ಲ” ಎಂದು ಹೇಳಿದರು.
ಈ ಬಗ್ಗೆ ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿ ಸಂತಾಪ ಸೂಚಿಸಿ ಸೋಮವಾರ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿದ್ದಾರೆ. ಪ್ರಾಂತೀಯ ಸರ್ಕಾರವನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ದಕ್ಷಿಣ ಕಿವುಗೆ ಬಿಕ್ಕಟ್ಟು ನಿರ್ವಹಣಾ ತಂಡವನ್ನು ಕಳುಹಿಸುತ್ತಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕಿವುವಿನಲ್ಲಿ ಪ್ರವಾಹಗಳು ಮತ್ತು ಭೂಕುಸಿತಗಳು ಇದೇ ಮೊದಲಲ್ಲ. ಈ ಹಿಂದೆ 2014 ರ ಅಕ್ಟೋಬರ್ ನಲ್ಲಿ ಭಾರೀ ಮಳೆಯಿಂದ 700 ಕ್ಕೂ ಹೆಚ್ಚು ಮನೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿತ್ತು. ವಿಶ್ವಸಂಸ್ಥೆಯ ಪ್ರಕಾರ, ಆ ಸಮಯದಲ್ಲಿ 130 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದರು ಎಂದು ತಿಳಿಸಿದೆ.