ಶಿಕ್ಷಣ ಪವಿತ್ರ ಗಂಗಾಜಲ: ಡಾ. ಮಳಗಿ

ವಿಜಯಪುರ : ಶಿಕ್ಷಣ ನಿತ್ಯ ನಿರಂತರವಾಗಿ ಹರಿಯುವ ಜಲವಾಗಬೇಕು ಹೊರತು ನಿಂತ ನೀರಾಗಬಾರದು ಎಂದು ಶಿಕ್ಷಣ ತಜ್ಞ ಡಾ.ವಿ.ವಿ. ಮಳಗಿ ಹೇಳಿದರು.

ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶೈಕ್ಷಣಿಕ ಚಿಂತನಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನವನ್ನು ರೂಪಿಸಿಕೊಡುವ ಕೌಶಲ್ಯಾತ್ಮಕ ಶಿಕ್ಷಣ ಇಂದು ಅವಶ್ಯಕವಾಗಿಬೇಕಾಗಿದೆ, ಶಿಕ್ಷಣ ನಿಂತ ನೀರಾಗಬಾರದು ಸದಾ ಹರಿಯುತ್ತಿರುವ ಗಂಗಾಜಲವಾಗಬೇಕು ಎಂದರು.

ನೆಲದ ನುಡಿಯ ನಂಟು ಹಾಗೂ ಶಿಕ್ಷಣ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದ ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ವೈ ಕೊಣ್ಣೂರ, ನೆಲ ಮತ್ತು ಭಾಷೆಗಳು ನಾಣ್ಯದ ಎರಡು ಮುಖಗಳಿದ್ದಂತೆ, ಕಣ್ಣು, ನಾಲಿಗೆ ಮತ್ತು ಮನಗಳು ಜ್ಞಾನದ ಹೆಬ್ಬಾಗಿಲುಗಳಿದ್ದಂತೆ. ಮಾತೃಭಾಷೆಯ ಮೂಲಕ ನೀಡಿದ ಶಿಕ್ಷಣ ಮಾತ್ರ ನಿಜವಾದ ಬದುಕನ್ನು ರೂಪಿಸಿಕೊಡಬಲ್ಲದು ಎಂದರು.

`ಭಾಷೆ ಹಾಗೂ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದ ಮುಖ್ಯೋಪಾಧ್ಯಾಯ ಎಸ್.ಜಿ ಮುಚ್ಚಂಡಿ ಮಾತನಾಡಿ, ಭಾಷಾ ಪಾಠಗಳ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸಬೇಕು, ಭಾಷೆ ದೈವದತ್ತವಲ್ಲ, ಅದು ಬುದ್ಧಿಯ ಸಂಕೇತ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ದೊಡ್ಡಣ್ಣ ಭಜಂತ್ರಿ ಮಾತನಾಡಿ, ಕನ್ನಡ ಭಾಷೆ ಇತರೆ ಭಾಷೆಗಳೊಂದಿಗೆ ಹೋರಾಟ ಮಾಡಿ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾಗಿದೆ, ಕನ್ನಡಮ್ಮನ ಸೇವೆ ನಾವು ಸದಾ ಸಿದ್ಧರಾಗಿಬೇಕು, ಕನ್ನಡ ಭಾಷಾ ಶ್ರೇಯೋಭಿವೃದ್ಧಿಗೆ ಸದಾ ಕಾರ್ಯೋನ್ಮುಖವಾಗಬೇಕು ಎಂದರು.
`ಭಾಷಾ ಕೌಶಲ್ಯಗಳು ಒಂದು ಅವಲೋಕನ’ ಎಂಬ ವಿಷಯದ ಕುರಿತಾಗಿ ಡಾ.ಮಾಧವ ಗುಡಿ ಉಪನ್ಯಾಸ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ವಿ.ಡಿ. ಐಹೊಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು.

ಪಿ.ಎಸ್. ಡೋಣೂರ ಸ್ವಾಗತಿಸಿದರು. ಪ್ರಶಾಂತ ಬೆಣ್ಣಿಮುದ್ದಿ ಹಾಗೂ ಜಗದೀಶ ಚಲವಾದಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ರೆಬಿನಾಳ ಕಾರ್ಯಕ್ರಮ ನಿರೂಪಿಸಿದರು, ಪ್ರೊ.ಸುಭಾಸ ಕನ್ನೂರ ವಂದಿಸಿದರು.

Latest Indian news

Popular Stories