ವಿಜಯಪುರ : ಸಮಾಜದಲ್ಲಿ ಅಸ್ಪೃಶ್ಯತೆ ಇನ್ನೂ ದೂರವಾಗಿಲ್ಲ, ಭೌತಿಕ ಅಷ್ಟೇ ಅಲ್ಲದೇ ಮಾನಸಿಕ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ, ದಲಿತರು ಎಂದು ಗೊತ್ತಾದ ಕಾರಣವೇ ಎಲ್ಲ ರೀತಿ ಇಂದ ಅರ್ಹತೆ ಇದ್ದರೂ ಅವರ ಫೈಲ್ಗಳನ್ನು ಮೂಲೆ ತಳ್ಳುವ ಮನಸ್ಥಿತಿ ಇನ್ನೂ ದೂರವಾಗಿಲ್ಲ, ಈ ಎಲ್ಲದರ ವಿರುದ್ಧ ಸಂಘಟಿತ ಹೋರಾಟ ನಡೆಯುತ್ತಲೇ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಡಿ.ಜಿ. ಸಾಗರ್ ನರೋಣಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಸೇರಿದಂತೆ ಅನೇಕ ಕಡೆಗಳಲ್ಲಿ ಅಸ್ಪೃಶ್ಯತೆ ಆಚರಣೆ ಪ್ರಸಂಗಗಳು ಕೇಳಿ ಬರುತ್ತಲೇ ಇವೆ, ಸಮಾನತೆ ಸಂಪೂರ್ಣವಾಗಿ ಸಾಧ್ಯವಾಗುವುವರೆಗೂ ಈ ಅಸ್ಪೃಶ್ಯತೆ ಎಂಬ ಪಿಡುಗು ದೂರವಾಗುವುದಿಲ್ಲ, ಭೌತಿಕ ಅಸ್ಪೃಶ್ಯತೆಯನ್ನು ನಾವು ನಿಯಂತ್ರಿಸಬಹುದು, ಆದರೆ ಮಾನಸಿಕ ಅಸ್ಪೃಶ್ಯತೆ ಕಣ್ಣಿಗೆ ಕಾಣುವುದಿಲ್ಲ, ಇದು ಅನೇಕರ ಮನಸ್ಸಿನಲ್ಲಿ ಜೀವಂತವಾಗಿದೆ ಎಂದು ವಿಷಾದಿಸಿದರು.
ಹಸಿವು ಅಸ್ಪೃಶ್ಯತೆಗಳಲ್ಲದ ಸಮಾಜ ನಮ್ಮ ಆದರ್ಶವಾಗಬೇಕಾಗಿದೆ. ಕರ್ನಾಟಕ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಸಂಘಟಿಸಿ ಒಗ್ಗಟ್ಟು ಮೂಡಿಸಿ ಕೋಮುವಾದಿ ಬಿ.ಜೆ.ಪಿ., ಆರ್.ಎಸ್.ಎಸ್. ಮತ್ತು ಸಂಘ ಪರಿವಾರವನ್ನು ಹಿಮ್ಮೆಟ್ಟಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಬೇಕಾಗಿದೆ ಎಂದರು.
ಸಂಘಟನೆಯ ಜಿಲ್ಲಾ ಸಂಚಾಲಕ ಸಿದ್ಧು ರಾಯಣ್ಣವರ ಮಾತನಾಡಿ, ಶೋಷಿತ ಜನರಲ್ಲಿ ಏಕತೆ ಮೂಡಿಸುವ ದೃಷ್ಟಿಯಿಂದ ಇದೇ ದಿ.31 ರಂದು ಬೆಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ್ ಅರಸು ಅವರ ಜಯಂತೋತ್ಸವ ಪ್ರಯುಕ್ತ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಏಕತಾ ಸಮಾವೇಶ ಆಯೋಜಿಸಲಾಗಿದೆ, ಇದೇ ಸಂದರ್ಭದಲ್ಲಿ ಕಳೆದ 40 ವರ್ಷಗಳಿಂದ ಡಿಎಸ್ಎಸ್ ಸಂಘಟನೆಯನ್ನೇ ತಮ್ಮ ಉಸಿರಾಗಿಸಿಕೊಂಡು ಬಂದಿರುವ ಡಿ.ಜಿ. ಸಾಗರ್ ಅವರ ಹಿಂದಿಯಲ್ಲಿ ರಚಿತವಾಗಿರುವ ಮಹಾನಾಯಕ ಡಿ.ಜಿ. ಸಾಗರ್ ಗ್ರಂಥ ಲೋಕಾರ್ಪಣೆ ನಡೆಯಲಿದೆ ಎಂದು ವಿವರಿಸಿದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಸತೀಶ ಜಾರಕಿಹೊಳಿ, ಬಿ. ನಾಗೇಂದ್ರ, ಶಿವರಾಜ್ ತಂಗಡಗಿ ಮೊದಲಾದವರು ಭಾಗಿಯಾಗಲಿದ್ದಾರೆ ಎಂದು ರಾಯಣ್ಣವರ ವಿವರಿಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟ ವೈ.ಸಿ. ಮಯೂರ ಮಾತನಾಡಿ, ಡಿ.ಜಿ. ಸಾಗರ್ ಅವರ ಇನ್ನೊಂದು ಹೆಸರೇ ಶೋಷಿತರ ಪರವಾದ ಹೋರಾಟ, `ದಲಿತ ಲೋಕದ ಧೃವತಾರೆ” ಎಂದು ವಿಶಿಷ್ಟ ರೀತಿಯ ಅಭಿನಂದನಾ ಗ್ರಂಥದ ಅನುವಾದ, ಹಿಂದಿ ಭಾಷೆಯಲ್ಲಿ ಪ್ರಟಕಗೊಂಡಿದ್ದು, ಪ್ರಸಿದ್ಧ ಲೇಖಕಿ ಪ್ರಗತಿಪರ ಚಿಂತಕಿ ಮಂಗಲಾ ಕಪರೆ ಗ್ರಂಥವನ್ನು ಅನುವಾದನ ಮಾಡಿದ್ದಾರೆ ಎಂದರು.
ಸಂಘಟನೆಯ ಪ್ರಮುಖರಾದ ರಮೇಶ ಧರಣಾಕಾರ, ಎಚ್. ಶಂಕರ ಕಲಬುರ್ಗಿ, ಶರಣು ಚಲವಾದಿ, ಅವಿನಾಶ ಬಾಣಿಕೋಲ, ರಮೇಶ ನಿಂಬಾಳಕರ, ಎಚ್.ಎ. ದಳಪತಿ, ದಶರಥ ಇಟಿ, ಸಾಯಬಣ್ಣ ದಳಪತಿ, ಜೈಭೀಮ ನಾಯಕೋಡಿ, ವಿಜು ಕಾಂಬಳೆ, ದೇವೇಂದ್ರ ಭಾವಿಮನಿ ಉಪಸ್ಥಿತರಿದ್ದರು.