ಭೂತನಾಳ-ಬೇಗಂ ತಲಾಬ ಅಭಿವೃದ್ದಿ ಕ್ರಮ ಕೈಗೊಳ್ಳಲು ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ

ವಿಜಯಪುರ: ಐತಿಹಾಸಿಕ ಬೇಗಂ ತಲಾಬ ಕೆರೆಯನ್ನು ಮಹಾನಗರ ಪಾಲಿಕೆ ಸುರ್ಪದಿಗೆ ಪಡೆದು ಸಾರ್ವಜನಿಕರಿಗೆ ವಾಯು ವಿವಾಹರಕ್ಕಾಗಿ ಸುಸಜ್ಜಿತ ಟ್ರ್ಯಾಕ್ ನಿರ್ಮಾಣ ಮಾಡಿ ಅಭಿವೃದ್ದಿಪಡಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚಿಸಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಭೂತನಾಳ ಕೆರೆ ಹಾಗೂ ಬೇಗಂ ತಲಾ ಕೆರೆಗಳ ಅಭಿವೃದ್ದಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬೇಗಂ ತಲಾಬ ಪ್ರಸ್ತುತ ಸಣ್ಣ ನೀರಾವರಿ ಇಲಾಖೆ ಉಸ್ತುವಾರಿಯಲ್ಲಿದೆ. ಕೆರೆಯ ವ್ಯಾಪ್ತಿಯಲ್ಲಿ ಕೆಬಿಜೆಎನ್ಎಲ್ ವತಿಯಿಂದ ವಾಹನ ನಿಲುಗಡೆ ಸ್ಥಳ, ಟಿಕೆಟ್ ಕೌಂಟರ್, ಫುಡ್ ಕೋರ್ಟ್, ಪಿಕನಿಕ್ ಸ್ಥಳ, ಶೌಚಾಲಯ, ಮಕ್ಕಳ ಉದ್ಯಾನವನ, ಓಪನ್ ಜಿಮ್, ನೀರಿನ ಕಾರಂಜಿ, ಬೆಳಿನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅಳವಡಿಸಿದ ಫ್ಲೇವರ್ ಬ್ಲಾಕ್ಗಳು ಹಾಳಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಾಯು ವಿಹಾರಕ್ಕಾಗಿ ಸುಸಜ್ಜಿತ ಟ್ರ್ಯಾಕ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಭೂತನಾಳ ಕೆರೆಯಲ್ಲಿ ಈಗಾಗಲೇ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಪ್ರಾಧಿಕಾರದಲ್ಲಿ ಸಂಗ್ರಹವಾದ ಕೆರೆ ಅಭಿವೃದ್ದಿ ನಿಧಿಯಡಿ 13.13 ಕೋಟಿ ರೂ. ಅಂದಾಜು ಮೊತ್ತದಲ್ಲಿ ಎರಡು ಹಂತಗಳಲ್ಲಿ ಸುಮಾರು 8-20 ಎಕರೆ ಪ್ರದೇಶದಲ್ಲಿ ಭೂತನಾಳ ವಾಟರ್ ಫ್ರಂಟ್ ಡೆವಲಪ್ಮೆಂಟ್ ಕೈಗೊಳ್ಳಲಾಗಿದೆ. ಮೊದಲನೇ ಹಂತದ ಯೋಜನೆ ಅಂದಾಜು 913.13 ಲಕ್ಷ, ಈವರೆಗೆ 554.29 ಲಕ್ಷ ಖರ್ಚು ಮಾಡಲಾಗಿದೆ. ಅಕ್ಟೋಬರ್ 2023ರೊಳಗಾಗಿ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಎರಡನೇ ಹಂತದ ಯೋಜನೆಗೆ ಒಟ್ಟು 398.55 ಲಕ್ಷ ಗಳ ಪೈಕಿ 73.17 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಜಲ ಕಾಯಗಳ ಪುನರುಜ್ಜೀವನಕ್ಕಾಗಿ ನಿಗದಿ ಮಾಡಿದ ಅನುದಾನದಲ್ಲಿ ಬಾಕಿ ಉಳಿದ 13 ಕೋಟಿ ರೂ. ಭೂತನಾಳ ಕೆರೆ ಅಭಿವೃದ್ದಿಗಾಗಿ ಕಾಯ್ದಿರಿಸುವಂತೆ ಅವರು ಸೂಚನೆ ನೀಡಿದರು.
ತಿಡಗುಂದಿ ಅಕ್ವಾಡೆಕ್ ಮೇಲ್ಭಾಗದಲ್ಲಿ ಪಾಟ್ಗಳನ್ನು ಇಟ್ಟು ಹನಿ ನೀರಾವರಿ ಮೂಲಕ ಗೋಡೆ ಮೇಲೆ ಹಬ್ಬುವ ಬಳ್ಳಿಯ ಸಸಿಗಳ ಪ್ಲಾಂಟೇಶನ್ ಮಾಡಬೇಕು. ಭೂತನಾಳ ಕೆರೆಯ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಸಸಿ ಬೆಳೆಸುವ ಕಾರ್ಯವಾಗಬೇಕು. ಭೂತನಾಳ ಹಾಗೂ ಬೇಗಂ ಕೆರೆ ಅಭಿವೃದ್ದಿಯಾದ ನಂತರ ಇದೇ ಮಾದರಿಯಲ್ಲಿ ಕುಮಟಗಿ ಕೆರೆ ಅಭಿವೃದ್ದಿ ಪಡಿಸಲು ಸೂಕ್ತ ಯೋಜನೆಯನ್ನು ರೂಪಿಸುವಂತೆ ಅವರು ಸೂಚನೆ ನೀಡಿದರು.
ಕೆನಾಲ್ ಮೂಲಕ ಕೆರೆ ತುಂಬಿಸುವ ಯೋಜನೆಯಂತೆ ಹಳ್ಳಗಳಿಗೂ ಸಹ ನೀರು ಬಿಡಲಾಗುತ್ತಿದ್ದು, ಹಳ್ಳಗಳು ಅತಿಕ್ರಮಣವಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ತೊಂದರೆಯಾಗುವುದರಿಂದ ಕೂಡಲೇ ಅತಿಕ್ರಮಣವಾಗಿರುವುದನ್ನು ತೆರವುಗೊಳಿಸಿ ಒಂದು ಮೀಟರ್ ಅಳತೆಯ ಚೆಕ್ ಡ್ಯಾಂಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಹಳ್ಳಗಳ ಕುರಿತು ಸರ್ವೆ ಕಾರ್ಯ ನಡೆಸುವಂತೆ ಅವರು ಸೂಚನೆ ನೀಡಿದರು.
ರೈತರಿಗೆ ಸಸಿಗಳನ್ನು ಕಡಿಮೆ ದರದಲ್ಲಿ ಪೂರೈಸಬೇಕು. ಸಸಿಗಳ ದರ ಹೆಚ್ಚಿಸುವುದರಿಂದ ಖರೀದಿಗೆ ರೈತರು ಆಸಕ್ತಿ ತೋರಿಸುತ್ತಿಲ್ಲ. ಸಸಿಗಳ ದರ ಕಡಿಮೆಗೊಳಿಸುವ ಕುರಿತು ಸೂಕ್ತ ಪ್ರಸ್ತಾವನೆ ತಯಾರಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಅವರು ಸೂಚನೆ ನೀಡಿದರು.
ಬಾಬಾನಗರ ಹಾಗೂ ಬಿಜ್ಜರಗಿ ಪ್ರದೇಶದಲ್ಲಿ ಸರ್ಕಾರಿ ಗೋಮಾಳ ಜಮೀನು ಗುರುತಿಸಿ, ಅತಿಕ್ರಮಣವಾದ ಜಮೀನನ್ನು ತೆರವುಗೊಳಿಸಿ ವಶಕ್ಕೆ ಪಡೆದು, ಆ ಸ್ಥಳದಲ್ಲಿ ಅರಣ್ಯೀಕರಣ ಕೈಗೊಳ್ಳುವಂತೆ ಅವರು ಸೂಚಿಸಿದರು.

Latest Indian news

Popular Stories