ಈಶ್ವರಪ್ಪನವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ: ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ

ವಿಜಯಪುರ : ಸದ್ಯ ಕೆ.ಎಸ್. ಈಶ್ವರಪ್ಪ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ, ಈ ವಿಷಯವಾಗಿ ನಾನು ಯಾವ ವಿಷಯವನ್ನೂ ಹೇಳಲಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ ಕೆ.ಎಸ್. ಈಶ್ವರಪ್ಪ ಅವರ ನಡೆಯ ಬಗ್ಗೆ ಜಾಣವಾಗಿ ಜಾರಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಪಕ್ಷಕ್ಕಾಗಿ ಸಂಘರ್ಷ ಮಾಡಿದ್ದಾರೆ. ಸಾಕಷ್ಟು ದುಡಿದಿದ್ದಾರೆ. ಅವರು ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ನಾನು ಅವರ ದುಃಖ ಅರ್ಥೈಸಿಕೊಂಡಿದ್ದೇನೆ. ಎಂದ ಅವರು, ಅವರ ಪುತ್ರ ಕಾಂತೇಶಗೆ ಲೋಕಸಭಾ ಟಿಕೆಟ್ ಸಿಗದ ಕಾರಣ ಈಶ್ವರಪ್ಪ ಅವರಿಗೆ ಬೇಸರವಾಗಿದೆ ಎಂದರು.

ಸದ್ಯ ಈಶ್ವರಪ್ಪನವರಿಗೆ ಭಗವಂತ ಒಳ್ಳೆಯ ಬುದ್ದಿ ಕೊಡಲಿ. ಅವರ ಬಗ್ಗೆ ನಾನು ಹೆಚ್ಚಿಗೆ ಏನೂ ಮಾತನಾಡಲು ಇಷ್ಟಪಡಲ್ಲ. ಅವರ ಬಗ್ಗೆ ನನಗೆ ದುಃಖವಿದೆ ಎಂದಷ್ಟೇ ಹೇಳಿದರು. ದೇಶದಲ್ಲೇ ಕಾಂಗ್ರೆಸ್ 40 ರಿಂದ 45 ಸ್ಥಾನಗಳನ್ನೂ ಸಹ ಗೆಲ್ಲುವುದಿಲ್ಲ, ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಆಡಳಿತಕ್ಕೆ ಜನರು ಬೇಸರಗೊಂಡಿದ್ದಾರೆ. ಡಿ.ಕೆ. ಶಿವಕುಮಾರ ಸಹೋದರ ಡಿ. ಕೆ. ಸುರೇಶ ವಿರುದ್ದ ಮಾತನಾಡಿದ ಅಗರವಾಲ್, ನಮ್ಮ ಅಭ್ಯರ್ಥಿ ಡಾ ಮಂಜುನಾಥ ಗೆಲ್ಲುತ್ತಾರೆ. ಕಾಂಗ್ರೆಸ್ನವರು ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಆದರೆ ಡಾ. ಮಂಜುನಾಥ ಚುನಾವಣೆಗೆ ಹಣವಿಲ್ಲವೆಂದಿದ್ದರು. ನಾವು ಅವರಿಗೆ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸಿದ್ದೇವೆ. ಅವರ ಬಳಿ ಹಣವಿಲ್ಲದಿದ್ದರೂ ಡಾ. ಮಂಜುನಾಥ ಅವರ ಸೇವೆ ಗೆಲ್ಲಲಿದ್ದಾರೆ ಎಂದರು.

ಇಡೀ ದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆಯಿದೆ. ಹೀಗಾಗಿ ಬಿಜೆಪಿಗೆ ಐತಿಹಾಸಿಕ ಸೀಟುಗಳು ಲಭ್ಯವಾಗಲಿವೆ. ತನ್ಮೂಲಕ 2024 ರ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನಾವು ಮತ್ತೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು. ಉತ್ತಮ ಕೆಲಸಗಾರರು ಆಗಿರುವ ಜಿಗಜಿಣಗಿ ಅವರು 2.5 ಲಕ್ಷದಿಂದ 3.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ನಗರ ಶಾಸಕ ಯತ್ನಾಳ, ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮಹೇಶ ಟೆಂಗಿನಕಾಯಿ, ಸಂಗಣ್ಣ ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಅರುಣ ಶಹಾಪುರ, ಸಂಜಯ ಪಾಟೀಲ ಕನಮಡಿ ಮತ್ತಿತರರಿದ್ದರು.

Latest Indian news

Popular Stories