ವಿಜಯಪುರ (ಡಿ.26): ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡಿಕೊಳ್ಳುವಾಗ ಸ್ಟೌವ್ ಸಿಡಿದು ಇಡೀ ಲಾರಿಯೇ ಸುಟ್ಟು ಕರಕಲಾದ ಘಟನೆ ವಿಜಯಪುರದ ಬಳಿ ನಡೆದಿದೆ.
ಸೊಲ್ಲಾಪುರಕ್ಕೆ ಪ್ಲೈವುಡ್ ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕ, ರಸ್ತೆ ಬದಿ ವಾಹನ ನಿಲ್ಲಿಸಿ ಅಡುಗೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಅಡುಗೆ ಮಾಡುವ ಸ್ಟೌವ್ ಸಿಡಿದು ಬೆಂಕಿಯ ಜ್ವಾಲೆ ಪಕ್ಕದಲ್ಲಿ ನಿಲ್ಲಿಸಿದ್ದ ಪ್ಲೈವುಡ್ ಲಾರಿಗೆ ತಗುಲಿದೆ. ನೋಡ ನೋಡುತ್ತಿದ್ದಂತೆ ಹೆದ್ದಾರಿ ಬಳಿಯ ಲಾರಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ.
ನಿಡಗುಂದಿ ತಾಲೂಕಿನ ಉಣ್ಣಿಬಾವಿ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲಿಯೇ ಇದ್ದ ಡಾಬಾದ ಬಳು ತಮಿಳುನಾಡು ಮೂಲದ ಲಾರಿ ಚಾಲಕ ತನ್ನ ಲಾರಿಯನ್ನು ನಿಲ್ಲಿಸಿ ಅಡುಗೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.