
ಮಣಿಪಾಲ : ದಲಿತ ಮಹಿಳೆಗೆ ಜೀವ ಬೆದರಿಕೆ : ಕರವೇ ಸದಸ್ಯನ ವಿರುದ್ಧ ಎಫ್ಐಆರ್ ..!
ಮಣಿಪಾಲ : ಡಿ. 26 : ದಲಿತ ಮಹಿಳೆಯೋರ್ವರು ಪರಿಶಿಷ್ಟ ಜಾತಿ /ಪಂಗಡ ನಿಗಮದಿಂದ ಸಾಲ ಪಡೆದು ತನಗೆ ನೀಡಲಿಲ್ಲ ಎಂಬ ದ್ವೇಷದಿಂದ, ಉಡುಪಿ ಜಿಲ್ಲಾ ಕರವೇ ಸದಸ್ಯನೋರ್ವ ಮಹಿಳೆಯ ಬಗ್ಗೆ ಸುಳ್ಳು ಮೆಸೇಜ್ ಹರಿಯಬಿಟ್ಟು ಮಾನ ಹಾನಿ ಮಾಡಿದ್ದಾನೆ ಎಂದು ನೊಂದ ಮಹಿಳೆ ಮಣಿಪಾಲ ಪೊಲೀಸರಿಗೆ ದೂರು ನೀಡಿದ ಘಟನೆ ನಿನ್ನೆ ನಡೆದಿದೆ.
ನೊಂದ ಮಹಿಳೆಯು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯೆಯಾಗಿದ್ದು, ಆರೋಪಿ ಪ್ರಭಾಕರ ಪೂಜಾರಿ ಎಂಬಾತ ಕೂಡಾ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯನಾಗಿದ್ದು, ಮಹಿಳೆಗೆ ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಪಡೆದು ನೀಡುವಂತೆ ಒತ್ತಾಯಿಸುತ್ತಿದ್ದನು ಎನ್ನಲಾಗಿದೆ.
ಮಹಿಳೆಯೂ ಸಾಲ ನೀಡಲು ನಿರಾಕರಿಸಿದ್ದು, ಸದ್ರಿ ದ್ವೇಷದಿಂದ ಆರೋಪಿ ಪ್ರಭಾಕರ ಪೂಜಾರಿ ಮಹಿಳೆಯ ನಡತೆಯ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಪ್ರಚಾರ ಮಾಡುತ್ತಿದ್ದು, ಮತ್ತೊರ್ವ ಕರವೇ ಸದಸ್ಯೆಯ ಮೊಬೈಲ್ಗೆ, ದಲಿತ ಮಹಿಳೆಯ ಕುರಿತು ಅವಹೇಳನಕಾರಿ ವಾಯ್ಸ್ ಮೆಸೇಜ್ ಕಳುಹಿಸಿರುತ್ತಾನೆ ಎನ್ನಲಾಗಿದೆ. ಸದ್ರಿ ವಾಯ್ಸ್ ಮೆಸೇಜ್ ನಲ್ಲಿ ನೊಂದ ಮಹಿಳೆಯ ಮಾನಕ್ಕೆ ಕುಂದು ಬರುವಂತಹ ಅವಾಚ್ಯ ಮಾತುಗಳು ಇದ್ದು, ಆಕೆಯ ಮನೆಗೆ ಬೆಂಕಿ ಹಾಕುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




