ವಿಜಯಪುರ: ಕಾಂಗ್ರೆಸ್ ಗೆ ಮತ ನೀಡಿದ ಮತದಾರರೇ ಇಂದು ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ರಾಜ್ಯದಲ್ಲಿಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳು ಕಳೆದಿವೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟಿರುವ ಭರವಸೆಗಳು ಸಹಜವಾಗಿ ರಾಜ್ಯದ ಜನರಲ್ಲಿ ಸಾಕಷ್ಟು ವಿಶ್ವಾಸ ಮೂಡಿಸಿತ್ತು ಹಾಗಾಗಿ ಕಾಂಗ್ರೆಸ್ಗೆ ಪ್ರಚಂಡ ಬಹುಮತ ಸಿಕ್ಕಿದೆ. ಭರವಸೆಗಳನ್ನು ನಂಬಿ ಜನ ಮತ ಹಾಕಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಆದರೇ ಇಂದು ಅದೇ ಮತದಾರೂ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇಡೀ ದೇಶದಲ್ಲಿಯೇ ಅಲ್ಪ ಅವಧಿಯಲ್ಲಿ ಜನಪ್ರೀಯತೆ ಕಳೆದುಕೊಂಡ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದರು.
ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಬಿಜೆಪಿ ಪಕ್ಷ ಬರಗಾಲದಲ್ಲಿ ಸಿಲುಕಿರುವ ರಾಜ್ಯದ ರೈತರಿಗೆ ಸರ್ಕಾರ ಸ್ಪಂದಿಸಬೇಕು. ಕಬ್ಬು ಬೆಳೆಗಾರರು, ದ್ರಾಕ್ಷಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದೇವು, ಆದರೇ ರಾಜ್ಯ ಸರ್ಕಾರ ಕಣ್ಣಿದ್ದು ಕುರುಡ, ಕಿವಿಯೆದ್ದರೂ ಕಿವುಡ ಎನ್ನುವಂತೆ ನಟನೆ ಮಾಡುತ್ತಿದೆ ಎಂದು ಕುಟುಕಿದರು.
ಸರ್ಕಾರ ರಾಜ್ಯದ ರೈತರಿಗೆ ಸ್ಪಂದಿಸದೆ ಇರುವುದು ದುರಾದೃಷ್ಟಕರ. ಪ್ರಧಾನಿಗೆ ಭೇಟಿಯಾಗಲು ದೆಹಲಿಗೆ ಹೋದಾಗ, ಐಶಾರಾಮಿ ವಿಮಾನದಲ್ಲಿ ಶೋಕಿ ಮಾಡಿ ಬಂದಿರುವುದನ್ನು ಅವರದ್ದೇ ಸಚಿವ ಜಮೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದರು.
ರೈತರಿಗೆ ಪರಿಹಾರ ನೀಡದೆ, ರೈತರಿಗೆ ಸ್ಪಂದನೆ ಮಾಡದೇ ರೈತರಿಗೆ ಅವಮಾನ ಮಾಡುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. ಉಸ್ತುವಾರಿ ಸಚಿವರು ಬರಗಾಲದ ಸಂದರ್ಭದಲ್ಲಿ ಜಿಲ್ಲಾ ಪ್ರವಾಸ ಮಾಡಿ, ಬರ ವೀಕ್ಷಣೆ ಮಾಡಲಿಲ್ಲ. ಕಂದಾಯ ಸಚಿವರು ಬೆಂಗಳೂರಿನ ಎಸಿ ರೂಮ್ನಲ್ಲಿ ಸಭೆ ಮಾಡಿದ್ರು, ಹೊರೆತು ಜಿಲ್ಲಾವಾರೂ ಭೇಟಿ ನೀಡಲಿಲ್ಲ.
ರಾಜ್ಯದ ರೈತರಿಗೆ ಪರಿಹಾರ ನೀಡುವ ಯೋಗ್ಯತೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಆದ್ರೇ ಅಲ್ಪಸಂಖ್ಯಾತರಿಗೆ 10 ಸಾವಿ ಕೋಟಿ ನೀಡುತ್ತೇನೆ ಎಂದು ಕಾರ್ಯಕ್ರಮ ಒಂದರಲ್ಲ ಮುಖ್ಯಮಂತ್ರಿಗಳು ಹೇಳುತ್ತಾರೆ. 1 ಸಾವಿರ ಕೋಟಿ ಹಣವನ್ನು ಅಲ್ಪಸಂಖ್ಯಾತ ಇರುವ ಕಾಲೋನಿಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದೇಶ ನೀಡಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತರಿಗೆ ಹಣ ನೀಡಲು ವಿರೋಧ ಮಾಡಲ್ಲ, ಆದರೇ ಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಮುಖ ಆದ್ಯತೆ ರೈತರಿಗೆ ನೀಡಬೇಕು ಎಂದರು.
ಇನ್ನು ರಾಜ್ಯ ಸರ್ಕಾರದ ಆದ್ಯತೆ ರೈತರಲ್ಲ, ಅವರ ಆದ್ಯತೆ ಅಲ್ಪಸಂಖ್ಯಾತರೂ ಮಾತ್ರ. ಅಲ್ಪಸಂಖ್ಯಾತರ ತುಷ್ಠಿಕರಣದ ನೀತಿಗಳು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭಾರಿ ಸಮಸ್ಯೆ ಉಂಟುಮಾಡಲಿದೆ. ನಿಮ್ಮ ನಡುವಳಿಕೆಯನ್ನು ರಾಜ್ಯದ ಮತದಾರು ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ರಾಜ್ಯದ ಜನ ಬರುವ ಲೋಕಸಭೆಯಲ್ಲಿ ಬಿಜೆಪಿ ಪಕ್ಷದ 28 ಜನ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಉತ್ತರ ನೀಡಲಿದ್ದಾರೆ ಎಂದರು.
ರಾಜ್ಯದ 7 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ 17 ಸಾವಿರಕ್ಕೂ ಅಧಿಕ ಕೋಠಡಿಗಳು ಬೇಕಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೋಠಡಿಗಳಿಲ್ಲದೆ, ಶಾಲಾ ಆವರಣ, ಸಮುದಾಯ ಭವನದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳಿಗೆ ಸುಸಜ್ಜಿತ ಕಟ್ಟಡ ನೀಡಲು ಆಗುತ್ತಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸಲು ಆಗುತ್ತಿಲ್ಲ. ಇದು ರಾಜ್ಯದ ರೈತರಿಗೆ ಮಾಡುತ್ತಿರುವ ಅವಮಾನವಾಗಿದೆ.
ಶಿಕ್ಷಣ ಸಚಿವರ 6.5 ಕೋಟಿ ಹಣದ ಚೆಕ್ ಬೌನ್ಸ್ ಆಗಿದೆ, ಡೆಪಾಸಿಟ್ ಮಾಡದೆ ಇದ್ದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದು ರಾಜ್ಯದ ಸಚಿವರ ಸ್ಥಿತಿಯಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ದಿನೆ ದಿನೆ ಸಂಕಷ್ಠಕ್ಕೆ ಸಿಲುಕಲಿದೆ.
ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗದ ದಾರುಣ ಪರಿಸ್ಥಿತಿ ಈಗಾಲೇ ರಾಜ್ಯದಲ್ಲಿ ಬಂದಿದೆ. 14 ಬಜೆಟ್ ಮಂಡನೆ ಮಾಡಿದ ಸಿ.ಎಂ ಸಿದ್ಧರಾಮಯ್ಯನವರು ವಿಲವಿಲ ಒದ್ದಾಡುತ್ತಿದ್ದಾರೆ. ಚುನಾವಣೆ ಗೆಲ್ಲಲು ನೀಡಿರುವ ಭರವಸೆ ಈಡೆರಿಸಲು ಸಾಧ್ಯವಾಗದೇ ಜಾಹೀರಾತುಗಳನ್ನು ನೀಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ.
ಇನ್ನು ಈ ಸರ್ಕಾರ ಯಾವುದೇ ಶಾಸಕರಿಗೂ ಒಂದೇ ಒಂದು ರೂಪಾಯಿ ಅನುದಾನವನ್ನು ನೀಡಿಲ್ಲ. ಶಾಸಕರು ಶಾಲಾ ಕೊಠಡಿ, ರಸ್ತೆ ಮಾಡಿಸುವ ಒಂದು ಉದಾಹರಣೆ ಇಲ್ಲ. ಈ ಸರ್ಕಾರ ಬಿಡಿಗಾಸನ್ನು ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿಲ್ಲ.
ನಿಮ್ಮ ಬೂಟಾಟಿಕೆ ರಾಜಕಾರಣ, ಅಲ್ಪಸಂಖ್ಯಾತರ ತುಷ್ಟಿಕರಣ ರಾಜಕಾರಣ ಬದಿಗಿಟ್ಟು ರಾಜ್ಯದಲ್ಲಿರುವ ರೈತರಿಗೆ ಸ್ಪಂದಿಸಬೇಕು, ಪರಿಹಾರ ನೀಡಬೇಕು, ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಬೇಕು ಎಂದರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುರಗೇಶ ನಿರಾಣಿ, ಆರ್.ಎಸ್.ಪಾಟೀಲ ಕುಚಬಾಳ, ರಮೇಶ ಜಿಗಜಿಣಗಿ, ರಮೇಶ ಭೂಸನೂರ, ಸಂಗಣ್ಣ ಬೆಳ್ಳೂಬ್ಬಿ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಅರುಣ ಶಹಾಪುರ, ಕಾಸುಗೌಡ ಬಿರಾದಾರ ಇದ್ದರು.