ವಿಜಯಪುರ : ಕಳೆದ ಬಾರಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ದೃಷ್ಟಿಯಿಂದ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿದ್ದ ಮಹೇಂದ್ರ ನಾಯಕ ಈಗ ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೇಟ್ ಪಡೆಯುವ ಆಕಾಂಕ್ಷೆ ವ್ಯಕ್ತಪಡಿಸಿದ್ದು ಶೇ.200 ರಷ್ಟು ಟಿಕೇಟ್ ತಮಗೆ ಖಾತ್ರಿ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಣದ ಕೈಗಳ ಕುತಂತ್ರದಿಂದ ಕಳೆದ ಬಾರಿ ನಾಗಠಾಣ ಟಿಕೇಟ್ ಕೈ ತಪ್ಪಿತು, ಈ ಬಾರಿ ಟಿಕೇಟ್ ದೊರಕುವ ಆಶಾಭಾವನೆ ಇದೆ, ವರಿಷ್ಠರು ಸಹ ನೀವು ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದರು.
ಪೊಲೀಸ್ ಅಧಿಕಾರಿಯಾಗುವ ಜೊತೆಗೆ ಸಮಾಜ ಸೇವೆಯನ್ನು ಮಾಡಿದ ಅನುಭವವಿದೆ ಎಂದರು.
ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ, ಯಾವ ಭರವಸೆ ಪಡೆದು ಪಕ್ಷ ಸೇರಿಲ್ಲ, ಒಂದು ಕ್ಷೇತ್ರಕ್ಕೆ ಅನೇಕ ಆಕಾಂಕ್ಷಿಗಳು ಇರುವುದು ಸಹಜ, ಟಿಕೇಟ್ ನೀಡದೇ ಹೋದರೂ ಸಹ ಬಿಜೆಪಿ ಪರವಾಗಿಯೇ ದುಡಿಯುವೆ ಎಂದರು.
ಕಳೆದ ಬಾರಿ ಗೋಪಾಲ ಕಾರಜೋಳ ಅಥವಾ ನನಗೆ ಟಿಕೇಟ್ ನೀಡಿದ್ದರೆ ನಾಗಠಾಣ ಬಿಜೆಪಿ ಪಾಲಾಗುತ್ತಿತ್ತು, ಹೊಸಮುಖಕ್ಕೆ ಟಿಕೇಟ್ ನೀಡಿದ ಪರಿಣಾಮ ಸೋಲು ಅನುಭವಿಸಬೇಕಾಯಿತು ಎಂದರು.
ಟಿಕೇಟ್ ಕೊಡಿಸಿದ ಹೊಸ ವ್ಯಕ್ತಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಜವಾಬ್ದಾರಿ ತೆಗೆದುಕೊಂಡಿದ್ದರೋ ಅವರೇ ಮುಂದೆ ಬರಲಿಲ್ಲ ಹೀಗಾಗಿ ಇದು ಸಹ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ನಮ್ಮ ಟಿಕೇಟ್ ಯಾರು ತಪ್ಪಿಸಿದ್ದಾರೋ ಅವರ ಟಿಕೇಟ್ ನಾವು ತಪ್ಪಿಸಲಿದ್ದೇವೆ ಅಷ್ಟೇ, ಆದರೂ ಪಕ್ಷ ಯಾರಿಗೆ ಟಿಕೇಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುವೆ ಎಂದು ನಾಯಕ ಸ್ಪಷ್ಟಪಡಿಸಿದರು.