ವಿಜಯಪುರ : ಪಕ್ಷದ ಕಾರ್ಯಕರ್ತ ಬಂಧುಗಳ ಆಶೀರ್ವಾದ, ಹಿರಿಯ ಮುಖಂಡರ ಅನುಗ್ರಹದ ಫಲವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಮತ್ತೊಮ್ಮೆ ನನ್ನ ಹೆಗಲಿಗೆ ಬಂದಿದೆ. ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪುನರಾಯ್ಕೆಯಾಗಿರುವುದು ನನ್ನ ಸುದೈವ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಆರ್.ಎಸ್. ಪಾಟೀಲ ಕುಚಬಾಳ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗಾದಿಗೆ ಭಾರೀ ರೇಸ್ ಏರ್ಪಟ್ಟಿತ್ತು. ಅನೇಕ ಘಟಾನುಘಟಿ ಮುಖಂಡರು ಜಿಲ್ಲಾಧ್ಯಕ್ಷ ಗಾದಿ ಮೇಲೆ ಕಣ್ಣಿರಿಸಿ ಪ್ರಬಲ ಲಾಬಿ ನಡೆಸಿದ್ದರು. `ಬಣ’ ರಾಜಕಾರಣ ಬಿಜೆಪಿಯಲ್ಲಿದ್ದರೂ ಸಹ ಯಾವ ಬಣದೊಂದಿಗೂ ಆಪ್ತವಾಗಿ ಗುರುತಿಸಿಕೊಳ್ಳದೇ, ಇನ್ನೊಂದು ಬಣದ ಜೊತೆಗೆ ಮುನಿಸಿಕೊಳ್ಳದೇ ಸಮಾನವಾಗಿ ಜವಾಬ್ದರಿ ನಿಭಾಯಿಸಿದ ಪರಿಣಾಮ ಆರ್.ಎಸ್. ಪಾಟೀಲ ಕುಚಬಾಳ ಹೆಗಲಿಗೆ ಮತ್ತೊಮ್ಮೆ ಜಿಲ್ಲಾಧ್ಯಕ್ಷ ಗಾದಿ ಒಲಿದಿದೆ.
ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದ ಆರ್.ಎಸ್. ಪಾಟೀಲ ಕುಚಬಾಳ, ಬಿಜೆಪಿಯಲ್ಲಿ ಯಾವ ಬಣ ರಾಜಕಾರಣವೂ ಇಲ್ಲ, ಎಲ್ಲ ನಾಯಕರು ನನ್ನ ಆಯ್ಕೆಗೆ ಸಹಕರಿಸಿ ಈ ಜವಾಬ್ದಾರಿಯನ್ನು ಹೊರೆಸಿದ್ದಾರೆ, ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.
ಲೋಕಸಭೆ ಚುನಾವಣೆಗೆ ದಿನ ಸಮೀಪಿಸುತ್ತಿವೆ, ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಮನೆಮಾತಾಗಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಿದೆ, ಈ ನಿಟ್ಟಿನಲ್ಲಿ ನಮ್ಮ ಧ್ಯೇಯವೆಲ್ಲವೂ ಈ ನಿಟ್ಟಿನತ್ತ ಸಾಗಿದೆ. ಖಂಡಿತವಾಗಿಯೂ ಈ ಬಾರಿಯೂ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಎಲ್ಲ ಕಾರ್ಯಕರ್ತರ, ಮುಖಂಡರ ಮಾರ್ಗದರ್ಶನ, ಸಲಹೆ ಸೂಚನೆ ಪಡೆದುಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ ಎಂದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.