ವಿಜಯಪುರ: ಅಂಗನವಾಡಿ ಮತ್ತು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಬಬಲೇಶ್ವರ ಪಟ್ಟಣದಲ್ಲಿ 2022-23ನೇ ಸಾಲಿನ ಪಶುಪಾಲನ ಮತ್ತು ವೈದ್ಯ ಸೇವಾ ಇಲಾಖೆ ಆರ್ ಐಡಿ ಎಫ್ ಯೋಜನೆಯ ಟ್ರಾಂಚ್ 28 ರಡಿ ರೂ. 50 ಲಕ್ಷ ವೆಚ್ಚದ ಪಶುವೈದ್ಯಕೀಯ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಇನ್ನು ಮುಂದೆ ದೇವಸ್ಥಾನಗಳಿಗೆ ಹಣ ಕೇಳಬಾರದು. ರೈತರು, ಬಡವರು, ಕೃಷಿ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ. ಇನ್ನು ಮುಂದೆ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡುತ್ತೇನೆ. ಅಂಗನವಾಡಿಗಳನ್ನು ಪ್ಲೆ ಸ್ಕೂಲ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸೂಚನೆ ನೀಡಲಾಗಿದೆ. ಎಲ್ಲ ಶಾಲೆಗಳಿಗೆ ಖಾಸಗಿ ಶಾಲೆಗಳ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶವಾಗಿದೆ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ವ್ಯವಸ್ಥೆ ನೀಡುವ ಮೂಲಕ ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ನಮ್ಮ ಮಕ್ಕಳಂತೆ ಉತ್ತಮ ಶಿಕ್ಷಣ ಪಡೆಯುವಂತಾಗಬೇಕು. ಹಂತ ಹಂತವಾಗಿ ಎಲ್ಲ ಶಾಲೆ ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ನೂತನ ತಾಲೂಕುಗಳಿಗೆ ಮೂಲಭೂತ ಸೌಕರ್ಯ ನೀಡಲಾಗುತ್ತಿದೆ. ಬಬಲೇಶ್ವರದಲ್ಲಿ ಸರಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಅಲ್ಲದೇ, ನಾನಾ ಇಲಾಖೆಗಳ ಕಚೇರಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿ ಅಗತ್ಯಕ್ಕೆ ತಕ್ಕಂತೆ ನಿಗದಿತ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಭರ್ತಿ ಮಾಡಬೇಕಾಗುತ್ತದೆ. ಸಂಬಂಧಿಸಿದ ಇಲಾಖೆಗಳ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಎರಡು ತಾಲೂಕುಗಳಿದ್ದು, ಎಲ್ಲ ಇಲಾಖೆಗಳ ಕಚೇರಿಗಳನ್ನು ಹಂತಹಂತವಾಗಿ ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ 2013-18 ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಮಾಡಿದ್ದೇನೆ. ರೈತರ ಜೀವನಮಟ್ಟ ಸುಧಾರಣೆಗೆ ಎಲ್ಲ ರೀತಿಯ ಕ್ರಮ ಕೈಗೊಂಡು, ಇಡೀ ಕುಟುಂಬ ಮುಂದಿನ ದಿನಗಳಲ್ಲಿ ತಲತಲಾಂತರಗಳ ಕಾಲ ಸುಖವಾಗಿರುವಂತೆ ಕೆಲಸ ಮಾಡಿದ್ದೇನೆ. ಮೊದಲು ಕುಡಿಯಲು ನೀರು ಇರುತ್ತಿರಲಿಲ್ಲ. ಹೊಲಗಳಿಗೆ ನೀರು ಪ್ರಶ್ನೆಯೇ ಇರಲಿಲ್ಲ. ಈಗ ಹೊಲಗಳಿಗೂ ನೀರು ಬಂದಿದೆ. ಇನ್ನು ಮುಂದೆ ಮಹಿಳೆಯರು ಮತ್ತು ಯುವಕರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಬಹುದೊಡ್ಡ ಕಾರ್ಯಕ್ರಮ ರೂಪಿಸುತ್ತೇವೆ. ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಈಗ ಚುನಾವಣೆ ಮುಗಿದಿದೆ ಇನ್ನು ಮುಂದಾದರೂ ಸಾರ್ವಜನಿಕರು ಒಳ್ಳೆಯದು, ಕೆಟ್ಟದ್ದರ ಕುರಿತು ಅವಲೋಕನ ಮಾಡಬೇಕು. ಎಲ್ಲರೂ ಒಂದೇ ಎಂದು ಅರ್ಥೈಸಿಕೊಳ್ಳಬೇಕು ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ, ಕಾಂಗ್ರೆಸ್ ಮುಖಂಡರಾದ ಚನ್ನಪ್ಪ ಕೊಪ್ಪದ, ಬಾಪುಗೌಡ ಪಾಟೀಲ ಶೇಗುಣಸಿ, ವಿ. ಎಸ್. ಪಾಟೀಲ, ವಿದ್ಯಾರಾಣಿ ತುಂಗಳ, ಬಿ. ಜಿ. ಬಿರಾದಾರ, ಪ್ರಕಾಶ ಸೊನ್ನದ, ಡಾ. ಗಂಗಾಧರ ಸಂಬಣ್ಣಿ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಜೆ. ಎಸ್. ಪಠಾಣ, ತಹಸೀಲ್ದಾರ ಸಂತೋಷ ಮ್ಯಾಗೇರಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ಬಜಂತ್ರಿ, ಪಪಂ ಮುಖ್ಯಾಧಿಕಾರಿ ಆರ್. ಎಸ್. ಸೋಲಾಪೂರ, ಬಬಲೇಶ್ವರ ಪಟ್ಟಣದ ಹಿರಿಯರು, ಯುವಕರು ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ, ಬಬಲೇಶ್ವರ ಪಟ್ಟಣದಲ್ಲಿರುವ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ಭೇಟಿ ನೀಡಿದ ಎಂ. ಬಿ. ಪಾಟೀಲ ಅವರು, ಡಾ. ಮಹಾದೇವ ಶಿವಾಚಾರ್ಯರ ಆರ್ಶಿವಾದ ಪಡೆದರು.