ವಿಜಯಪುರ : ವಿದ್ಯುತ್ ದರ ಏರಿಕೆ ವಿರೋಧಿಸಿ ಮರ್ಚಂಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅನೇಕ ವ್ಯಾಪಾರಸ್ಥರು ಕೆಲಕಾಲ ಅಂಗಡಿ-ಮುಗ್ಗಟ್ಟು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಮರ್ಚ್ಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ, ವಿದ್ಯುತ್ ದರ ಏರಿಕೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗಿಯಾದರು. ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.
ಪ್ರತಿಭಟನೆಗೆ ವಿಜಯಪುರ ಜಿಲ್ಲಾ ಫೋಟೋಗ್ರಾಫರ್ ಸಂಘ, ಸ್ಟೇಷನರಿ ವರ್ತಕರ ಸಂಘ, ಪೆಟ್ರೋಲ್-ಡಿಸೇಲ್ ಅಸೋಸಿಯೇಷನ್ ಸೇರಿದಂತೆ 40 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.
ನೇತೃತ್ವ ವಹಿಸಿದ್ದ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ವಿದ್ಯುತ್ ದರ ಏರಿಕೆ ವ್ಯಾಪಾರೋದ್ಯಮ ಹಾಗೂ ಸಾರ್ವಜನಿಕರಿಗೆ ದೊಡ್ಡ ಹೊರೆ ಸೃಷ್ಟಿಸಿದೆ. ದುಬಾರಿ ವಿದ್ಯುತ್ ದರದಿಂದಾಗಿ ವ್ಯಾಪಾರೋದ್ಯಮ ಸಂಕಷ್ಟ ಅನುಭವಿಸಿ ಮುಚ್ಚುವ ಹಂತಕ್ಕೆ ಬಂದರೆ ದೊಡ್ಡ ಮಟ್ಟದ ನಿರುದ್ಯೋಗ ಸೃಷ್ಟಿಯಾಗಲಿದೆ, ದುಡಿಯುವ ವರ್ಗಕ್ಕೂ ಸಹ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಫ್‌ಎಸಿ ದರ 0.57 ಇರುವುದನ್ನು ಏಕಾಏಕಿಯಾಗಿ 2.55 ರೂ.ಗೆ ಅನೇಕಪಟ್ಟು ಹೆಚ್ಚಿಗೆ ಮಾಡಿರುವುದು ಅವೈಜ್ಞಾನಿಕವಾಗಿದೆ, ಎಲ್.ಟಿ. ಸಂಪರ್ಕವನ್ನು 140 ರೂ.ಗಳಿಂದ 199 ಪ್ರತಿಕಿಲೋ ವ್ಯಾಟ್‌ಗೆ ಹೆಚ್ಚಿಸಲಾಗಿದೆ, ಅದೇ ತೆರನಾಗಿ ಬೃಹತ್ ಕೈಗಾರಿಕೆಗಳಿಗೆ ಪ್ರತಿಕಿಲೋ ವ್ಯಾಟ್‌ಗೆ 265 ರಿಂದ 350 ರೂ.ಗಳವರೆಗೆ ಏರಿಕೆ ಮಾಡಿರುವುದರಿಂದ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಹೊಡೆತವಾಗಿದೆ ಎಂದರು. ಈ ರೀತಿಯ ಅವೈಜ್ಞಾನಿಕ ವಿದ್ಯುತ್ ದರವನ್ನು ಕೂಡಲೇ ನಿಯಂತ್ರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ವ್ಯಾಪಾರೋದ್ಯಮ ಸಂಘಟನೆಗಳ ಪ್ರಮುಖರಾದ ಮನೋಜ್ ಬಗಲಿ, ಆನಂದ ಡಿಗ್ಗಾಂವಿ, ಪ್ರವೀಣ ವಾರದ, ಮಹೇಶ ಬಿದನೂರ, ಜಯಾನಂದ ತಾಳಿಕೋಟೆ, ಪೋರವಾಲ, ತೋಸ್ನಿವಾಲ್, ಜೋಗೂರ, ರವಿ ಕುಲಕರ್ಣಿ, ನಿಡೋಣಿ, ಗೊಬ್ಬೂರ ಸೇರಿದಂತೆ ವಿವಿಧ ವ್ಯಾಪಾರೋದ್ಯಮಿಗಳು ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.