ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವ: ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮಾ. 10 ರಂದು ರವಿವಾರ ‘ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವ’ ಕಾರ್ಯಕ್ರಮ ಆಯೋಜಿಸಿದ್ದು, ಇದನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಅರವಿಂದ ಪಾಟೀಲ ತಿಳಿಸಿದ್ದಾರೆ.
ರವಿವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಈ ರಂಗೋಲಿಗಳನ್ನು ವೀಕ್ಷಿಸಬಹುದಾಗಿದೆ.
ಈ ಮಹೋತ್ಸವ ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್, ಲಂಡನ್ ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್, ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್, ಎಲೈಟ್ ವಲ್ರ್ಡ್ ರೆಕಾಡ್ರ್ಸ್, ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ದಾಖಲಾಗುವ ನಿಟ್ಟಿನಲ್ಲಿ ಮಹತ್ವ ಹೆಜ್ಜೆಯಾಗಿದೆ. ಈ ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಜನ ವೈದ್ಯಕೀಯ ವಿದ್ಯಾರ್ಥಿಗಳು 50 ಸಾವಿರ ಚದುರ ಅಡಿ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಠ್ಯಕ್ಕೆ ಪೂರಕವಾದ 250 ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಲಿದ್ದಾರೆ. 40 ಜನ ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು ಇದರ ಉಸ್ತುವಾರಿ ವಹಿಸಲಿದ್ದಾರೆ. ಇದಕ್ಕಾಗಿ 10 ಟನ್ ರಂಗೋಲಿ ಬಳಕೆಯಾಗುತ್ತಿದೆ. 10 ಅಡಿ ಉದ್ದ, 12 ಅಡಿ ಅಗಲ ಅಳತೆಯ ರಂಗೋಲಿ ಚಿತ್ರಗಳನ್ನು ಬಿಡಿಸಲಾಗುವುದು.
ವೈದ್ಯಕೀಯ ಶಿಕ್ಷಣದ ಬೋಧನೆ, ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ವಿದ್ಯಾರ್ಥಿಗಳಿಗೆ ಚಿತ್ರಬಿಡಿಸುವ ಕೌಶಲ್ಯಾಭಿವೃದ್ಧಿ ಪಡಿಸುವುದು ಮತ್ತು ಆರೋಗ್ಯದ ಬಗ್ಗೆ ರಂಗೋಲಿಯ ಕಲೆಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಡಾ. ಅರವಿಂದ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories