ಮೋದಿ ಅವರನ್ನು ಟೀಕಿಸುವುದೇ ಕಾಂಗ್ರೆಸ್ ಪಕ್ಷದ ಚಾಳಿ: ಸಂಜಯ ಪಾಟೀಲ

ವಿಜಯಪುರ : ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬಂತೆ ಮೋದಿ ಅವರನ್ನು ಟೀಕಿಸುವುದೇ ಕಾಂಗ್ರೆಸ್ ಪಕ್ಷದ ಚಾಳಿ, ಈ ಚಾಳಿ ಈಗ ಶಿವರಾಜ್ ತಂಗಡಗಿಗೆ ಬಂದಿದೆ, ಇಡೀ ವಿಶ್ವವೇ ಮೆಚ್ಚಿಕೊಂಡಿರುವ ಜನನಾಯಕನ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಶಿವರಾಜ್ ತಂಗಡಗಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ವಕ್ತಾರ ಸಂಜಯ ಪಾಟೀಲ ಕನಮಡಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಮೋದಿ ಅವರನ್ನು ಟೀಕಿಸುವುದೇ ಕಾಂಗ್ರೆಸ್ ಪಕ್ಷದ ಕೆಟ್ಟ ಚಾಳಿ, ಈ ಹಿಂದೆ ಸೋನಿಯಾ ಗಾಂಧಿ ಮೋದಿ ಅವರನ್ನು ಸಾವಿನ ವ್ಯಾಪಾರಿ, ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಮೋದಿ ಅವರನ್ನು ವಿಷ ಸರ್ಪ ಎಂದಿದ್ದರು, ಈಗ ಸಚಿವ ಶಿವರಾಜ್ ತಂಗಡಗಿ ಮೋದಿ ಬೆಂಬಲಿಸುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಕಟ್ಟಿಟ್ಟ ಬುತ್ತಿ, ಚುನಾವಣಾ ಸೋಲಿನ ವಾಸನೆ ಬರುತ್ತಿದ್ದಂತೆ ಕಾಂಗ್ರೆಸ್ ಮೋದಿಯವರ ಬಗ್ಗೆ, ಕೆಟ್ಟದಾಗಿ ಮಾತನಾಡುತ್ತದೆ. ದೇಶದಲ್ಲಿ ಪಾತಾಳಕ್ಕೆ ತಲುಪಿರುವ ಕಾಂಗ್ರೆಸ್, ರಾಜ್ಯದಲ್ಲೂ ಪಾತಾಳಕ್ಕೆ ಕುಸಿಯುವ ಭಯದಿಂದ ಈ ರೀತಿ ಹೇಳಿಕೆಗಳನ್ನು ನೀಡುತ್ತಿದೆ ಎಂದರು.

ದೇಶದ ಯುವಕರು ಮೋದಿಯವರ ಆಡಳಿತವನ್ನು ಮೆಚ್ಚಿ ಮೂರನೇ ಬಾರಿಗೆ ಮೋದಿಯವರನ್ನು ಗೆಲ್ಲಿಸುವ ಉತ್ಸಾಹವನ್ನು ಕಾಂಗ್ರೆಸ್ಸಿಗೆ ನೋಡಲಾಗುತ್ತಿಲ್ಲ ಎಂದರು.
ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇ.4.7 ರಷ್ಟು ಕುಸಿದಿದೆ. ಆರ್ಥಿಕತೆಯಲ್ಲಿ ಭಾರತ 5 ನೇ ಸ್ಥಾನಕ್ಕೇರಿವುದರ ಪರಿಣಾಮ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರಕಿವೆ. ಅದಕ್ಕಾಗಿ ಯುವಜನತೆ ಮೋದಿ ಮೋದಿ ಎನ್ನುತ್ತಾರೆ. ಇದನ್ನು ಸಹಿಸದ ಕಾಂಗ್ರೆಸ್ ತೀರ ಕೆಳಮಟ್ಟಕ್ಕೆ ಇಳಿದು ತನ್ನ ನಾಲಿಗೆಯನ್ನು ಹಿರಿಬಿಟ್ಟಿದೆ ಎಂದು ಅಸಮಾಧಾನ ಹೊರಹಾಕಿದರು.

ನರೇಂದ್ರ ಮೋದಿಯವರ ಆಡಳಿತದಲ್ಲಿ ಯುವಕರು ತಮ್ಮದೇ ದೇಶದ ನೂರಾರು ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಅಪ್ ಸಂಸ್ಥೆಗಳನ್ನು ಶುರುಮಾಡಿದ್ದಾರೆ. ಅದಕ್ಕಾಗಿಯೇ ಮೋದಿಗೆ ಮತ ನೀಡುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ಸಿನ 5 ವರ್ಷದ ನಕಲಿ ಗಾಂಧಿ ಕುಟುಂಬದ ಯುವಕನಿಗೆ ಮಾತ್ರ ಉದ್ಯೋಗ ಸಿಗುತ್ತಿಲ್ಲ ಅಷ್ಟೇ ಎಂದು ಟೀಕಿಸಿದರು.
ಮುಖಂಡರಾದ ಈರಣ್ಣ ರಾವೂರ, ಪವನ ಕುಲಕರ್ಣಿ, ವಿಜಯ ಜೋಶಿ, ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories